ರಿಚಾ ಸ್ಫೋಟಕ ಫಿಫ್ಟಿ ವ್ಯರ್ಥ – ರೋಚಕ ಪಂದ್ಯದಲ್ಲಿ ಡೆಲ್ಲಿಗೆ 1 ರನ್‌ ಜಯ, RCBಗೆ ಸೋಲು

ನವದೆಹಲಿ: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ಮಹಿಳಾ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ರಿಚಾ ಘೋಷ್‌ ಅವರ ಸ್ಫೋಟಕ ಬ್ಯಾಟಿಂಗ್‌ ಹೊರತಾಗಿಯೂ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ತಂಡವು 1 ರನ್‌ ರೋಚಕ ಜಯ ಸಾಧಿಸಿದೆ. ಈ ಮೂಲಕ ಮಹಿಳಾ ಪ್ರೀಮಿಯರ್‌ಲೀಗ್‌ನ (WPL 2024) 2ನೇ ಆವೃತ್ತಿಯಲ್ಲಿ ಫ್ಲೇಆಫ್‌ ಪ್ರವೇಶಿಸಿದ 2ನೇ ತಂಡವಾಗಿ ಹೊರಹೊಮ್ಮಿದೆ.

181 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಆರ್‌ಸಿಬಿಗೆ (RCB) ಕೊನೆಯ ಓವರ್‌ನಲ್ಲಿ 17 ರನ್‌ಗಳ ಅಗತ್ಯವಿತ್ತು. ಕ್ರೀಸ್‌ನಲ್ಲಿದ್ದ ರಿಚಾ ಘೋಷ್‌ (Richa Ghosh) ಮೊದಲ ಎಸೆತವನ್ನೇ ಸಿಕ್ಸರ್‌ ಬಾರಿಸಿ ಗೆಲುವಿನ ಆಸೆ ಚಿಗುರಿಸಿದ್ದರು. 2ನೇ ಎಸೆದಲ್ಲಿ ಯಾವುದೇ ರನ್‌ ಬರಲಿಲ್ಲವಾದರೂ, 3ನೇ ಎಸೆತದಲ್ಲಿ 2 ರನ್‌ ಕದಿಯಲು ಯತ್ನಿಸಿ ಒಂದು ವಿಕೆಟ್‌ ಒಪ್ಪಿಸಬೇಕಾಯಿತು. 4ನೇ ಎಸೆತದಲ್ಲಿ 2 ರನ್‌ ಗಳಿಸಿದ ರಿಚಾ, 5ನೇ ಎಸೆತದಲ್ಲಿ ಸಿಕ್ಸರ್‌ ಬಾರಿಸಿದರು. ಕೊನೇ ಎಸೆತದಲ್ಲಿ ಗೆಲುವಿಗೆ 2 ರನ್‌ ಬೇಕಿತ್ತು. ಆದ್ರೆ ಸ್ಟ್ರೈಕ್‌ನಲ್ಲಿದ್ದ ರಿಚಾ ಘೋಷ್‌ ಬಾಲ್‌ ಎದುರಿಸಿದರೂ ಒಂದು ರನ್‌ ಕದಿಯುವಲ್ಲಿಯೂ ವಿಫಲರಾಗಿ ರನೌಟ್‌ಗೆ ತುತ್ತಾದರು. ಇದರಿಂದ ಗೆಲ್ಲುವ ಖುಷಿಯಲ್ಲಿದ್ದ ಆರ್‌ಸಿಬಿ ವಿರೋಚಿತ ಸೋಲಿಗೆ ತುತ್ತಾಯಿತು. ಆಟಗಾರರಿಬ್ಬರು ಮೈದಾನದಲ್ಲೇ ಕುಳಿಯು ಕಣ್ಣೀರಿಟ್ಟ ಪ್ರಸಂಗವೂ ನಡೆಯಿತು.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 181 ರನ್‌ ಗಳಿಸಿತ್ತು. ಈ ಗುರಿ ಬೆನ್ನತ್ತಿದ ಆರ್‌ಸಿಬಿ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 180 ರನ್‌ಗಳಿಸಿ ಒಂದು ರನ್‌ಗಳಿಂದ ವಿರೋಚಿತ ಸೋಲನುಭವಿಸಿತು.

ಚೇಸಿಂಗ್‌ ಆರಂಭಿಸಿದ ಆರ್‌ಸಿಬಿಗೆ ಆರಂಭದಲ್ಲೇ ನಾಯಕಿ ಸ್ಮೃತಿ ಮಂಧಾನ (Smriti Mandhana) ಔಟಾಗಿ ನಿರಾಸೆ ಮೂಡಿಸಿದರು. ನಂತರದಲ್ಲಿ ಸೋಫಿ ಮೊಲಿನೆಕ್ಸ್ 33 ರನ್‌, ಎಲ್ಲಿಸ್‌ ಪೆರ್ರಿ 49 ರನ್‌, ಸೋಫಿ ಡಿವೈನ್‌ 26 ರನ್‌, ಜಾರ್ಜಿಯಾ ವೇರ್ಹ್ಯಾಮ್ 12 ರನ್‌ ಗಳ ಕೊಡುಗೆ ನೀಡಿದ್ದರು. ಕೊನೆಯವರೆಗೂ ಕ್ರೀಸ್‌ನಲ್ಲಿ ಉಳಿದಿದ್ದ ರಿಚಾಘೋಷ್‌ ಅವರ ಮೇಲೆ ಗೆಲುವು ಅವಲಂಬಿತವಾಗಿತ್ತು. ಸತತವಾಗಿ ಹೋರಾಡಿದ ರಿಚಾ, ಕೊನೇ ಎಸೆತದಲ್ಲಿ ರನೌಟ್‌ಗೆ ತುತ್ತಾಗಿ ನಿರಾಸೆ ಮೂಡಿಸಿದರು.

ಇದಕ್ಕೂ ಮುನ್ನ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ ಪರ, ನಾಯಕಿ ಮೆಗ್‌ ಲ್ಯಾನಿಂಗ್‌ 29 ರನ್‌, ಶಫಾಲಿ ವರ್ಮಾ 23 ರನ್‌, ಜೆಮಿಮಾ ರೊಡ್ರಿಗ್ಸ್‌ 58 ರನ್‌, ಅಲಿಸ್ ಕ್ಯಾಪ್ಸಿ 48 ರನ್‌, ಮಾರಿಜಾನ್ನೆ ಕಪ್‌ 12 ರನ್‌, ಜೆಸ್‌ ಜೊನಾಸೆನ್‌ ಮತ್ತು ರಾಧಾ ಯಾದವ್‌ ತಲಾ ಒಂದೊಂದು ರನ್‌ ಗಳಿಸಿದರು.

ಇನ್ನೂ ಆರ್‌ಸಿಬಿ ಪರ ಸ್ಮಿನ್‌ ಜಾದು ನಡೆಸಿದ ಶ್ರೇಯಾಂಕ ಪಾಟೀಲ್‌ 4 ಓವರ್‌ಗಳಲ್ಲಿ 26 ರನ್‌ ಬಿಟ್ಟುಕೊಟ್ಟು 4 ವಿಕೆಟ್‌ ಕಿತ್ತರೆ, ಆಶಾ ಸೊಭನಾ ಒಂದು ವಿಕೆಟ್‌ ಪಡೆದರು. ಡೆಲ್ಲಿ ಪರ ಮಾರಿಜಾನ್ನೆ ಕಪ್‌, ಅಲಿಸ್‌ ಕ್ಯಾಪ್ಸಿ, ಶಿಖಾ ಪಾಂಡೆ, ಅರುಂಧತಿ ರೆಡ್ಡಿ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.