ಪಾಕ್ ಮಣಿಸಿ ಏಷ್ಯಾ ಕಪ್ ಫೈನಲ್ ಪ್ರವೇಶಿಸಿದ ಟೀಂ ಇಂಡಿಯಾ ಮಹಿಳಾ ತಂಡ

ಕೌಲಾಲಂಪುರ: ಮಲೇಷ್ಯಾದಲ್ಲಿ ನಡೆಯುತ್ತಿರುವ ಮಹಿಳಾ ಟಿ20 ಏಷ್ಯಾ ಕಪ್ ನಲ್ಲಿ ಟೀಂ ಇಂಡಿಯಾ ಪಾಕಿಸ್ತಾನ ವಿರುದ್ಧ 7 ವಿಕೆಟ್ ಗಳಿಂದ ಜಯ ಗಳಿಸಿ ಫೈನಲ್ ತಲುಪಿದೆ.

ಟೂರ್ನಿಯ ಕೊನೆ ಲೀಗ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸಿದ ಟೀಂ ಇಂಡಿಯಾ ಉತ್ತಮ ಬೌಲಿಂಗ್ ದಾಳಿ ನಡೆಸಿ ಪಾಕ್ ಬ್ಯಾಟ್ ಮನ್ಸ್ ಗಳನ್ನು (72/7) ಅಲ್ಪ ಮೊತ್ತಕ್ಕೆ ಕಟ್ಟಿಹಾಕಲು ಯಶಸ್ವಿ ಆಯಿತು. ಪಾಕ್ ಮೊತ್ತವನ್ನು ಬೆನ್ನತ್ತಿದ ಟೀಂ ಇಂಡಿಯಾ ಬಹುಬೇಗ ಮಿಥಾಲಿ ರಾಜ್ (0), ದೀಪ್ತಿ ಶರ್ಮಾ (0) ವಿಕೆಟ್ ಕಳೆದುಕೊಂಡಿತು. ಈ ವೇಳೆ ತಂಡಕ್ಕೆ ಆಸರೆಯಾದ ಸ್ಮೃತಿ ಮಂದಣ್ಣ (38), ಕ್ಯಾಪ್ಟನ್ ಹರ್ಮನ್ ಪ್ರೀತ್ ಕೌರ್ ಅಜೇಯ (34) ರನ್‍ಗಳ ನೆರವಿನಿಂದ 16.1 ಓವರ್ ಗಳಲ್ಲಿ ನಿಗದಿತ ಗುರಿ ತಲುಪಿತು.

ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಪಾಕ್ ತಂಡದ ಪರ ನಹಿದಾ ಖಾನ್ (18), ಸಾನಾ ಮಿರ್ (ಅಜೇಯ 20) ಎರಡಂಕಿ ಮೊತ್ತ ದಾಟಿದರೆ, ಉಳಿದೆಲ್ಲಾ ಆಟಗಾರ್ತಿಯರು ಭಾರತ ಬೌಲಿಂಗ್ ದಾಳಿಗೆ ಒಂದಂಕಿ ರನ್ ಗೆರೆದಾಟಲು ವಿಫಲರಾದರು. ಭಾರತದ ಪರ ಎಕ್ತಾ ಬಿಶ್ತ್ 14 ರನ್ ನೀಡಿ ಮೂರು ವಿಕೆಟ್ ಪಡೆದರೆ ಹಾಗೂ ಶಿಖಾ ಪಾಂಡೆ, ಅನುಜ ಪಾಟೀಲ್, ಪೂನಮ್ ಯಾದವ್ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.

ಇದುವರೆಗೂ ಟೂರ್ನಿಯಲ್ಲಿ 5 ಪಂದ್ಯಗಳನ್ನು ಆಡಿರುವ ಟೀಂ ಇಂಡಿಯಾ 4 ಗೆಲುವು ಪಡೆದು ಪಟ್ಟಿಯಲ್ಲಿ 8 ಅಂಕಗಳೊಂದಿಗೆ ಮೊದಲ ಸ್ಥಾನ ಪಡೆದು ಫೈನಲ್ ತಲುಪಿದೆ. ಸದ್ಯ ಟೂರ್ನಿಯಲ್ಲಿ 6 ಅಂಕ ಪಡೆದಿರುವ ಪಾಕ್ ಎರಡನೇ ಸ್ಥಾನದಲ್ಲಿ ಇದ್ದು, ಅಷ್ಟೇ ಅಂಕ ಪಡೆದಿರುವ ಅಫ್ಘಾನಿಸ್ತಾನ ಮೂರನೇ ಸ್ಥಾನ ಪಡೆದಿದೆ. ಸದ್ಯ ಅಫ್ಘಾನ್ ತಂಡ 4 ಪಂದ್ಯಗಳನ್ನು ಆಡಿದ್ದು, ಮುಂದಿನ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ ಆಡಲಿದೆ. ಈ ಪಂದ್ಯದಲ್ಲಿ ಅಫ್ಘಾನ್ ಸೋಲುಂಡರೆ ಮತ್ತೆ ಟೀಂ ಇಂಡಿಯಾ ಪ್ರಶಸ್ತಿಗಾಗಿ ಪಾಕ್ ಅನ್ನು ಎದುರಿಸಲಿದೆ.

 

Comments

Leave a Reply

Your email address will not be published. Required fields are marked *