ಸೋಶಿಯಲ್ ‌ಮೀಡಿಯಾದಲ್ಲಿ ಬರೆದು ದೇಶದ ಮಾನ ಕಳೀಬೇಡಿ – ಮಹಿಳಾ ಆಯೋಗದ ಮುಖ್ಯಸ್ಥೆ ತೀವ್ರ ಆಕ್ಷೇಪ

– ಸ್ಪೇನ್‌ ಮಹಿಳೆ ಮೇಲೆ ಗ್ಯಾಂಗ್‌ ರೇಪ್‌; ಭಾರತದ ವಿರುದ್ಧ ಯುಎಸ್‌ ಪತ್ರಕರ್ತ ಆಕ್ಷೇಪಾರ್ಹ ಹೇಳಿಕೆ

ನವದೆಹಲಿ: ಸ್ಪೇನ್‌ ಮೂಲದ ಮಹಿಳೆಯ (Spanish Woman) ಮೇಲೆ ಏಳು ಮಂದಿ ಸಾಮೂಹಿಕ ಅತ್ಯಾಚಾರ (Gang Rape) ಎಸಗಿದ ಘಟನೆ ಜಾರ್ಖಂಡ್‌ನಲ್ಲಿ (Jharkhand) ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಯುಎಸ್‌ ಮೂಲದ ಪತ್ರಕರ್ತರೊಬ್ಬರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿರುವ ಸಂದೇಶಕ್ಕೆ ರಾಷ್ಟ್ರೀಯ ಮಹಿಳಾ ಆಯೋಗದ ಮುಖ್ಯಸ್ಥೆ ರೇಖಾ ಶರ್ಮಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸೋಶಿಯಲ್‌ ಮೀಡಿಯಾಗಳಲ್ಲಿ ಬರೆದು ದೇಶದ ಮಾನ ಕಳೆಯಬೇಡಿ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಯುಎಸ್‌ ಮೂಲದ ಪತ್ರಕರ್ತ ಡೇವಿಡ್ ಜೋಸೆಫ್ ವೊಲೊಡ್ಜ್ಕೊ ಅವರು, ಹಲವು ವರ್ಷಗಳಿಂದ ಭಾರತದಲ್ಲಿ ವಾಸಿಸುತ್ತಿದ್ದೇನೆ. ಇಲ್ಲಿ ಕಂಡ ಲೈಂಗಿಕ ಆಕ್ರಮಣದ ಮಟ್ಟವು ಎಲ್ಲಿಯೂ ಕಂಡಿರಲಿಲ್ಲ ಎಂದು ತಮ್ಮ ಸೋಶಿಯಲ್‌ ಮೀಡಿಯಾ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಒತ್ತುವರಿ ತೆರವು – ಮದ್ಯದ ಉದ್ಯಮಿಯ 400 ಕೋಟಿ ರೂ. ಮೌಲ್ಯದ ಫಾರ್ಮ್‌ಹೌಸ್‌ ಧ್ವಂಸ

ಈ ಹಿಂದೆ ನಾನು ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಬ್ರಿಟಿಷ್‌ ಮಹಿಳೆಯೊಬ್ಬರು ತನ್ನ ಬಂಕ್‌ನಲ್ಲಿ (ಕಂಪಾರ್ಟ್ಮೆಂಟ್‌) ಮಲಗಲು ಅವಕಾಶ ಮಾಡಿಕೊಡುವಂತೆ ಕೇಳಿಕೊಂಡಿದ್ದಳು. ಏಕೆಂದರೆ ಹಾಲ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಆಕೆಯ ಕಾಲುಗಳನ್ನು ನೆಕ್ಕುತ್ತಾ ಅಸಭ್ಯವಾಗಿ ವರ್ತಿಸುತ್ತಿದ್ದ, ಇದರಿಂದ ಆಕೆ ಅಸುರಕ್ಷತೆಗೆ ಒಳಗಾಗಿದ್ದಳು. ಮತ್ತೊಮ್ಮೆ ಮಹಿಳಾ ಸ್ನೇಹಿತೆಯೊಬ್ಬರಿಗೆ ಪರಿಚಯವಾಗಿದ್ದ ವ್ಯಕ್ತಿ ಆಕೆ ಕೈಕುಲುಕಲು ಮುಂದಾದಾಗ ಆಕೆಯ ಸ್ತನಗಳನ್ನ ಮುಟ್ಟಿ ಅಶ್ಲೀಲ ಕೃತ್ಯ ಎಸಗಿದ್ದ. ನಾನು ಭಾರತವನ್ನು ಸದಾ ಪ್ರೀತಿಸುತ್ತೇನೆ, ಪ್ರಪಂಚದ ನೆಚ್ಚಿನ ಸ್ಥಳಗಳಲ್ಲಿ ಭಾರತವೂ ನನಗೆ ಒಂದಾಗಿದೆ. ಆದ್ರೆ ಅಲ್ಲಿಗೆ ಮಹಿಳೆಯರು ಒಬ್ಬಂಟಿಯಾಗಿ ಪ್ರಯಾಣಿಸುತ್ತೇನೆ ಅನ್ನೋರಿಗೆ ಮಾತ್ರ ಸಲಹೆ ನೀಡಲು ಬಯಸುತ್ತೇನೆ. ಇದು ಭಾರತೀಯ ಸಮಾಜದಲ್ಲಿ ಹೆಚ್ಚು ಗಮನ ಹರಿಸಬೇಕಾದ ನಿಜವಾದ ಸಮಸ್ಯೆಯಾಗಿದೆ ಎಂದು ಬರೆದುಕೊಂಡಿದ್ದಾರೆ.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ರಾಷ್ಟ್ರೀಯ ಮಹಿಳಾ ಆಯೋಗದ ಮುಖ್ಯಸ್ಥೆ ರೇಖಾ ಶರ್ಮಾ, ಡೇವಿಡ್ ಜೋಸೆಫ್ ವೊಲೊಡ್ಜ್ಕೊ ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿರುವ ಘಟನೆಗಳ ಬಗ್ಗೆ ಎಂದಾದರೂ ಪೊಲೀಸರಿಗೆ ಮಾಹಿತಿ ನೀಡಿದ್ದಾರಾ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಸೋಶಿಯಲ್‌ ಮೀಡಿಯಾಗಳಲ್ಲಿ ಬರೆದು, ದೇಶದ ಮಾನ ಕಳೆಯ ಬೇಡಿ, ಸೋಶಿಯಲ್‌ ಮೀಡಿಯಾದಲ್ಲಿ ಬರೆದು ಇಡೀ ದೇಶವನ್ನು ದೂಷಿಸುವುದು ಸರಿಯಲ್ಲ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಮೋದಿ, ಅಮಿತ್‌ ಶಾ, ರಾಜನಾಥ್‌ ಸಿಂಗ್‌, ಸ್ಮೃತಿ ಇರಾನಿ – ಬಿಜೆಪಿ ಮೊದಲ ಪಟ್ಟಿಯಲ್ಲಿರೋ ಪ್ರಮುಖರು ಯಾರ‍್ಯಾರು?

ಏನಿದು ಘಟನೆ?
ಕಳೆದ ಶುಕ್ರವಾರ ರಾತ್ರಿ ಜಾರ್ಖಂಡ್‌ ರಾಜಧಾನಿ ರಾಂಚಿಯಿಂದ 300 ಕಿ.ಮೀ ದೂರದಲ್ಲಿರುವ ಡುಮ್ಕಾದಲ್ಲಿ (Dumka) ಸ್ಪೇನ್‌ ಮೂಲದ ಮಹಿಳೆಯ ಮೇಲೆ ಏಳು ಮಂದಿ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದ್ದು, ಉಳಿದ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಘಟನೆಯ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಲಾಗಿದೆ. ಮಹಿಳೆ ಇನ್‌ಸ್ಟಾಗ್ರಾಮ್‌ ಈ ಸಂಬಂಧ ಭಯಾನಕ ಅನುಭವ ವಿವರಿಸಿದ್ದಾಳೆ. 7 ಪುರುಷರು ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ. ಆರಂಭದಲ್ಲಿ ಹೊಡೆದು ಬಡಿದು ನಮ್ಮ ವಸ್ತುಗಳನ್ನು ದರೋಡೆ ಮಾಡಿದರು. ನಂತರ ನನ್ನ ಮೇಲೆ ಅತ್ಯಾಚಾರ ಎಸಗಿದರು ಎಂದು ಮಹಿಳೆ ಹೇಳಿದ್ದಾಳೆ. ಬಾಂಗ್ಲಾದೇಶದಿಂದ ಎರಡು ಬೈಕ್‌ಗಳಲ್ಲಿ ಆಗಮಿಸಿದ ದಂಪತಿ ಬಿಹಾರದ ಮೂಲದ ನೇಪಾಳಕ್ಕೆ ಹೋಗಲು ಮುಂದಾಗಿದ್ದರು. ಡುಮ್ಕಾದಲ್ಲಿ ಹೊರ ಭಾಗದಲ್ಲಿ ತಾತ್ಕಾಲಿಕ ಟೆಂಟ್‌ನಲ್ಲಿ ತಂಗಿದ್ದಾಗ 7 ಮಂದಿ ಆಗಮಿಸಿ ದರೋಡೆ ಮಾಡಿ ಥಳಿಸಿದ್ದಾರೆ.

ಬೆಳಕಿಗೆ ಬಂದಿದ್ದು ಹೇಗೆ?
ಶುಕ್ರವಾರ ರಾತ್ರಿ 11 ಗಂಟೆಯ ಸುಮಾರಿಗೆ ರಸ್ತೆ ಬದಿಯಲ್ಲಿ ಇಬ್ಬರು ತಿರುಗಾಡುತ್ತಿರುವುದು ಪೊಲೀಸರ ಗಸ್ತು ತಂಡ ಗಮನಿಸಿದೆ. ವಿದೇಶಿಯರು ಯಾವುದೋ ಸಮಸ್ಯೆಗೆ ಸಿಲುಕಿದ್ದಾರೆ ಎಂದು ಭಾವಿಸಿ ಅವರೊಂದಿಗೆ ಮಾತನಾಡಲು ಮುಂದಾಗಿದ್ದಾರೆ. ಇಬ್ಬರೂ ಸ್ಪ್ಯಾನಿಷ್ ಭಾಷೆ ಮಾತನಾಡುತ್ತಿದ್ದರಿಂದ ಪೊಲೀಸರಿಗೆ ಅವರು ಏನು ಹೇಳುತ್ತಿದ್ದಾರೆಂದು ಅರ್ಥವಾಗಲಿಲ್ಲ. ನಂತರ ಇವರಿಗೆ ಸ್ವಲ್ಪ ಚಿಕಿತ್ಸೆ ಅಗತ್ಯವಿದೆ ಎಂದು ಭಾವಿಸಿ ಪೊಲೀಸರು ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆತಂದರು. ಈ ವೇಳೆ ಆಸ್ಪತ್ರೆಯ ವೈದ್ಯರ ಜೊತೆ ಸ್ಪ್ಯಾನಿಷ್ ದಂಪತಿ ತಮಗೆ ಆದ ಅನುಭವವನ್ನು ತಿಳಿಸಿದ ಬಳಿಕ ಕೃತ್ಯ ಬೆಳಕಿಗೆ ಬಂದಿದೆ.