ಗುಡಿಸಲಿಗೆ ಆಕಸ್ಮಿಕ ಬೆಂಕಿ- ಮನೆ ಒಳಗೆ ಇಟ್ಟಿದ್ದ ಹಣ ತರಲು ಹೋಗಿ ಸುಟ್ಟು ಕರಕಲಾದ ಮಹಿಳೆ

ಹಾಸನ: ಗುಡಿಸಲಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಅದರಲ್ಲಿ ಇಟ್ಟಿದ್ದ ಹಣವನ್ನು ತರಲು ಹೋಗಿ ಮಹಿಳೆಯೊಬ್ಬರು ಸಜೀವ ದಹನವಾಗಿರುವ ದಾರುಣ ಘಟನೆ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಸುಂಡಹಳ್ಳಿ ಗ್ರಾಮದಲ್ಲಿ ನಡೆದಿದೆ.

ಸುಂಡಹಳ್ಳಿ ಗ್ರಾಮದಲ್ಲಿ ಕಮಲಬಾಯಿ(60) ಮೃತ ದುರ್ದೈವಿ. ಕಮಲಬಾಯಿ ಹಾಗೂ ಅವರ ಪತಿ ಕುಮಾರನಾಯ್ಕ ಇಬ್ಬರೇ ಒಂದು ಗುಡಿಸಲಿನಲ್ಲಿ ವಾಸವಾಗಿದ್ದರು. ಶನಿವಾರ ಪತಿ ಮನೆಯಿಂದ ಹೊರಹೋಗಿದ್ದರು. ಈ ವೇಳೆ ತಡರಾತ್ರಿ ಸುಮಾರು 3 ಗಂಟೆ ಹೊತ್ತಿಗೆ ಗುಡಿಸಲಿಗೆ ಬೆಂಕಿ ಹೊತ್ತಿಕೊಂಡಿದೆ. ಗುಡಿಸಲಿನಲ್ಲಿ ಮಲಗಿದ್ದ ಕಮಲಬಾಯಿ ಬೆಂಕಿಬಿದ್ದ ಕೂಡಲೇ ಮನೆಯಿಂದ ಹೊರ ಬಂದಿದ್ದಾರೆ. ಬಳಿಕ ಮನೆ ಒಳಗೆ ಇಟ್ಟಿದ್ದ ಹಣ ತರಲು ಹೋಗಿ ವಾಪಸ್ ಬರಲು ಆಗದೇ ಬೆಂಕಿಗೆ ಬಲಿಯಾಗಿದ್ದಾರೆ.

ಬೆಂಕಿಯ ಅಟ್ಟಹಾಸಕ್ಕೆ ಮನೆಯಲ್ಲಿದ್ದ ವಸ್ತುಗಳೆಲ್ಲಾ ಸುಟ್ಟು ಕರಕಲಾಗಿದೆ. ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *