ಬೆಳ್ಳಿ ಕಾಲುಚೈನಿಗೋಸ್ಕರ 55ರ ಮಹಿಳೆಯ ಕಾಲುಗಳನ್ನೇ ಕತ್ತರಿಸಿ, ಕೊಲೆಗೈದು ಬಿಸಾಕಿದ್ರು!

ಹೈದರಾಬಾದ್: ಕಾಲುಗಳನ್ನು ಕತ್ತರಿಸಿದ ಸ್ಥಿತಿಯಲ್ಲಿ ಅಪರಿಚಿತ ಮಹಿಳೆಯೊಬ್ಬರ ಮೃತದೇಹ ಹೈದರಾಬಾದ್‍ನ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಯ ಆವರಣದಲ್ಲಿ ಪತ್ತೆಯಾಗಿದೆ.

ಮೃತ ಮಹಿಳೆಯನ್ನು 55 ವರ್ಷದ ನರ್ಸಮ್ಮ ಎಂದು ಗುರುತಿಸಲಾಗಿದ್ದು, ಇವರು ನಲ್ಲಕುಂಟ ನಿವಾಸಿ ಎನ್ನಲಾಗಿದೆ. ಮಹಿಳೆ ಧರಿಸಿದ್ದ ಕಾಲುಚೈನಿಗೋಸ್ಕರ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಅಂತ ಎಸ್‍ಆರ್ ನಗರ ಪೊಲೀಸರು ಶಂಕಿಸಿದ್ದಾರೆ.

ನರ್ಸಮ್ಮ ಮಗಳು ಗರ್ಭಿಣಿಯಾಗಿದ್ದು, ಹೀಗಾಗಿ ಆಕೆಯನ್ನು ತವರು ಮನೆಗೆ ಕರೆದುಕೊಂಡು ಹೋಗಲೆಂದು ಅವರು ಕೆಲ ದಿನಗಳ ಹಿಂದೆ ಮಗಳಿರೋ ರೆಹಮತ್ ನಗರಕ್ಕೆ ಬಂದಿದ್ದರು ಅಂತ ಡಿಸಿಪಿ ಎಆರ್ ಶ್ರೀನಿವಾಸ್ ಹೇಳಿದ್ದಾರೆ.

ಇದೇ ಜೂನ್ 13ರಂದು ನರ್ಸಮ್ಮ ಅವರು ಮದ್ಯಪಾನ ಮಾಡಬೇಕು ಅಂತ ಹೇಳಿದ್ದರು. ಹೀಗಾಗಿ ಮದ್ಯ ಖರೀದಿಸಲೆಂದು ಅಳಿಯ ಅಂಗಡಿ ಬಳಿ ಬಿಟ್ಟು ಹೋಗಿದ್ದರು. ಇದೇ ವೇಳೆ ದುಷ್ಕರ್ಮಿಗಳು ನರ್ಸಮ್ಮ ಅವರನ್ನು ಅಪಹರಿಸಿ ಕೊಲೆ ಮಾಡಿದ್ದಾರೆ. ದುಷ್ಕರ್ಮಿಗಳು ಮಹಿಳೆಯನ್ನು ಅಪಹರಿಸುವ ದೃಶ್ಯ ಅಂಗಡಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಆಸ್ಪತ್ರೆ ಆವರಣದಲ್ಲಿ ಮಹಿಳೆಯೊಬ್ಬರ ಶವವನ್ನು ಕಂಡು ಸ್ಥಳೀಯರು ಪೊಲೀಸರು ಹಾಗೂ ಆಸ್ಪತ್ರೆ ಸಿಬ್ಬಂದಿಗೆ ಮಾಹಿತಿ ನಿಡಿದ್ದಾರೆ. ಹೀಗಾಗಿ ಸಂಜೆ 4 ಗಂಟೆ ಸುಮಾರಿಗೆ ಈ ಭಯಾನಕ ಘಟನೆ ಬೆಳಕಿಗೆ ಬಂದಿದೆ. ದುಷ್ಕರ್ಮಿಗಳು ಮಹಿಳೆಯ ಕಾಲುಚೈನಿಗೋಸ್ಕರ ಆಕೆಯ ಪಾದಗಳನ್ನು ಕತ್ತರಿಸಿ, ಬಳಿಕ ಆಕೆಯನ್ನು ಬರ್ಬರವಾಗಿ ಕೊಲೆಗೈದಿದ್ದಾರೆ. ಮಾತ್ರವಲ್ಲದೇ ತನಿಖೆಯ ದಾರಿ ತಪ್ಪಿಸಲು ಆಕೆಯ ಮೃತದೇಹವನ್ನು ಬೇರೆ ಬೇರೆ ಕಡೆ ಬಿಸಾಕಿರಬಹುದು ಎಂಬುದಾಗಿ ಪೊಲೀಸರು ಶಂಕಿಸಿದ್ದಾರೆ.

ದುರಂತವೆಂದರೆ ಆಸ್ಪತ್ರೆಯಲ್ಲಿ ಸುಮಾರು 16 ಸಿಸಿಟಿವಿ ಕ್ಯಾಮೆರಾಗಳಿದ್ದು, ಆದ್ರೆ ಕೊಲೆ ನಡೆದ ಸ್ಥಳದಲ್ಲಿ ಯಾವುದೇ ಸಿಸಿಟಿವಿಗಳಿರಲಿಲ್ಲ. ಅದಲ್ಲದೇ ಮೃತ ಮಹಿಳೆ ಆಸ್ಪತ್ರೆಯ ರೋಗಿಯೂ ಅಲ್ಲ. ಯಾಕಂದ್ರೆ ಮಹಿಳೆಯ ಮೃತದೇಹ ಸಿಕ್ಕಿದ ಕೂಡಲೇ ಸಿಬ್ಬಂದಿ ಆಸ್ಪತ್ರೆಯಲ್ಲಿದ್ದ ಎಲ್ಲಾ ರೋಗಿಗಳ ಹಾಜರಿ ಕರೆದಿದ್ದಾರೆ. ಈ ವೇಳೆ ಎಲ್ಲಾ ರೋಗಿಗಳು ಆಸ್ಪತ್ರೆಯಲ್ಲೇ ಇದ್ದರು. ಹೀಗಾಗಿ ಮೃತ ಮಹಿಳೆ ಆಸ್ಪತ್ರೆಯ ರೋಗಿ ಅಲ್ಲ ಎಂಬುದಾಗಿ ತಿಳಿದುಬಂದಿದೆ.

ಸದ್ಯ ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರೋ ಸ್ಥಳೀಯ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Comments

Leave a Reply

Your email address will not be published. Required fields are marked *