ಮೆಕ್ಕಾ ಮದೀನಾಕ್ಕೆ ಹೋಗಿದ್ದ ಮಹಿಳೆಗೆ ಕೊರೊನಾ ಶಂಕೆ

– ಮಣಿಪಾಲ ಕೆಎಂಸಿಗೆ ದಾಖಲು

ಉಡುಪಿ: ಮಹಾಮಾರಿ ಕೊರೊನಾದ ಲಕ್ಷಣವಿರುವ ಮಹಿಳೆಯನ್ನು ಉಡುಪಿ ಜಿಲ್ಲೆ ಮಣಿಪಾಲ ನಗರದ ಕೆಎಂಸಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನವರಾದ 68 ವರ್ಷದ ಮಹಿಳೆ, ಕೆಲ ದಿನಗಳ ಹಿಂದೆ ಮೆಕ್ಕಾ ಮದೀನಾ ಪ್ರವಾಸ ಮಾಡಿದ್ದರು. ಧಾರ್ಮಿಕ ಪ್ರವಾಸದ ಸಂದರ್ಭ ಮಹಿಳೆಗೆ ಉಸಿರಾಟದ ಸಮಸ್ಯೆ ಎದುರಾಗಿತ್ತು. ಸೌದಿಯ ಆಸ್ಪತ್ರೆಯಲ್ಲಿ ಜ್ವರ- ಕಫ ಮತ್ತು ಶೀತಕ್ಕೆ ಚಿಕಿತ್ಸೆ ಪಡೆದುಕೊಂಡಿದ್ದರು. ಅಲ್ಲಿ ಗುಣಮುಖರಾದ ನಂತರ ಮಹಿಳೆ ಬೆಂಗಳೂರಿಗೆ ವಾಪಸ್ಸಾಗಿದ್ದರು. ಬೆಂಗಳೂರಿನಲ್ಲಿ ಮತ್ತೆ ಜ್ವರ ಕಾಣಿಸಿಕೊಂಡಿತ್ತು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಹಿಳೆ ಚಿಕಿತ್ಸೆಯನ್ನು ಪಡೆದು ಡಿಸ್ಚಾರ್ಜ್ ಆಗಿದ್ದರು.

ಶಿವಮೊಗ್ಗಕ್ಕೆ ವಾಪಾಸ್ಸಾದಾಗ ಅಲ್ಲೂ ಮತ್ತದೇ ಸಮಸ್ಯ ಬಾಧಿಸಿತ್ತು. ಸಾಗರದ ಖಾಸಗಿ ಆಸ್ಪತ್ರೆಯಲ್ಲೂ ಮಹಿಳೆ ಚಿಕಿತ್ಸೆಯನ್ನು ಪಡೆದಿದ್ದರು. ಆದರೆ ಉಸಿರಾಟದ ಸಮಸ್ಯೆ ಉಲ್ಬಣವಾದ ಕಾರಣ ಮಹಿಳೆಯನ್ನು ಮಣಿಪಾಲದ ಕೆಎಂಸಿಗೆ ಕುಟುಂಬಸ್ಥರು ದಾಖಲು ಮಾಡಿದ್ದಾರೆ. ಜ್ವರ, ಶೀತ, ಸೀನು, ಉಸಿರಾಟ ಸಮಸ್ಯೆ ಮತ್ತು ಎದೆ ನೋವು ಇರುವುದರಿಂದ ಮಹಿಳೆಗಿರುವ ಸಮಸ್ಯೆ ಕೊರೊನಾ ಲಕ್ಷಣದ ಜೊತೆ ತಳಕು ಹಾಕುತ್ತಿದೆ. ಈ ಹಿನ್ನೆಲೆಯಲ್ಲಿ ಕೆಎಂಸಿ ಆಸ್ಪತ್ರೆಯಲ್ಲಿ ವಿಶೇಷ ಕೊಠಡಿಯನ್ನು ವ್ಯವಸ್ಥೆ ಮಾಡಿ ಮಹಿಳೆಗೆ ಚಿಕಿತ್ಸೆ ಆರಂಭಿಸಲಾಗಿದೆ.

ಇದೊಂದು ಶಂಕಿತ ಕೇಸ್ ಆಗಿರುವುದರಿಂದ ಈ ಬಗ್ಗೆ ಈಗಲೇ ಎಲ್ಲಾ ಮಾಹಿತಿ ಕೊಡಲು ಸಾಧ್ಯವಿಲ್ಲ. ಮಹಿಳೆಯ ಗಂಟಲ ದ್ರವವನ್ನು ಬೆಂಗಳೂರಿಗೆ ರವಾನೆ ಮಾಡುತ್ತೇವೆ. ಮೂರು ದಿನಗಳ ನಂತರ ವರದಿ ಬರಬಹುದು ಎಂದು ಉಡುಪಿ ಡಿಎಚ್‍ಒ ಡಾಕ್ಟರ್ ಸುಧೀರ್ ಚಂದ್ರ ಸೋಡಾ ಮಾಹಿತಿ ನೀಡಿದ್ದಾರೆ. ಮಹಿಳೆಗೆ 68 ವಯಸ್ಸಾಗಿರುವುದರಿಂದ ಆಕೆ ವಿದೇಶ ಪ್ರವಾಸ ಮಾಡಿರುವುದರಿಂದ ಉಸಿರಾಟ ಸಮಸ್ಯೆ ಬಂದಿರಬಹುದು, ರೋಗಗಳು ಶೀಘ್ರ ನಿವಾರಣೆ ಆಗುತ್ತಿಲ್ಲ ಎನ್ನಲಾಗಿದೆ.

Comments

Leave a Reply

Your email address will not be published. Required fields are marked *