ಪಾರ್ಟಿ ಮೂಡಲ್ಲಿದ್ದ ಪ್ರಿಯತಮನಿಗೆ ಏಕಾಏಕಿ ಚಾಕು ಇರಿದ ಪ್ರೇಯಸಿ!

ಹಾಸನ: ಪ್ರಿಯತಮೆಯೊಬ್ಬಳು ತನ್ನ ಪ್ರಿಯಕರನೊಂದಿಗೆ ಜಗಳ ಮಾಡಿ, ಏಕಾಏಕಿ ಚಾಕು ಇರಿದ ಘಟನೆ ನಗರದ (Hassan) ಬಿ.ಎಂ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ಬಳಿ ನಡೆದಿದೆ.

ಚಾಕು ಇರಿತಕ್ಕೊಳಗಾದ ಯುವಕನನ್ನು ಎ.ಗುಡುಗನಹಳ್ಳಿ ಗ್ರಾಮದ ಮನುಕುಮಾರ್ (25) ಎಂದು ಗುರುತಿಸಲಾಗಿದೆ. ಚಾಕು ಇರಿದ ಯುವತಿಯನ್ನು ಭವಾನಿ ಎಂದು ಗುರುತಿಸಲಾಗಿದೆ. ಇಬ್ಬರೂ ಒಂದೇ ಗ್ರಾಮದವರಾಗಿದ್ದಾರೆ. ಮನುಕುಮಾರ್ ಹಾಗೂ ಭವಾನಿ ಜೊತೆಯಲ್ಲಿಯೇ ವಿದ್ಯಾಭ್ಯಾಸ ಮಾಡಿದ್ದರು. ಪರಸ್ಪರ ಪ್ರೀತಿಸುತ್ತಿದ್ದರು, ಕೆಲ ದಿನಗಳಿಂದ ಇಬ್ಬರು ದೂರವಾಗಿದ್ದರು ಎಂದು ತಿಳಿದು ಬಂದಿದೆ.

ಮಂಗಳವಾರ ರಾತ್ರಿ ಹೊಸ ವರ್ಷಾಚರಣೆಗೆ ಸ್ನೇಹಿತರ ಜೊತೆ ಖಾಸಗಿ ಹೋಟೆಲ್‍ಗೆ ಮನುಕುಮಾರ್ ಬಂದಿದ್ದ. ಈ ವೇಳೆ ಯುವತಿ ಪದೇ ಪದೇ ಮನುಕುಮಾರ್‌ಗೆ ಕರೆ ಮಾಡಿದ್ದಾಳೆ. ಬಳಿಕ ತಡರಾತ್ರಿ 12:30ರ ವೇಳೆಗೆ ಹೋಟೆಲ್ ಬಳಿ ಬಂದ ಭವಾನಿ, ಅಲ್ಲೇ ಬಿದ್ದಿದ್ದ ಪಾಸ್ ಹಾಕಿಕೊಂಡು ಗೇಟ್ ಒಳಗೆ ಪ್ರವೇಶಿಸಿದ್ದಾಳೆ. ಅಷ್ಟರಲ್ಲಿ ಗೇಟ್ ಬಳಿ ಬಂದ ಮನುಕುಮಾರ್ ಬಂದಿದ್ದಾನೆ. ಆಗ ಇಬ್ಬರ ನಡುವೆ ಜಗಳ ಆರಂಭವಾಗಿದೆ. ಈ ವೇಳೆ ಸ್ನೇಹಿತರು ಜಗಳ ಬಿಡಿಸಲು ಮುಂದಾಗಿದ್ದಾರೆ. ಅಷ್ಟರಲ್ಲೇ ಯುವತಿ ಆತನಿಗೆ ಏಕಾಏಕಿ ಚಾಕು ಇರಿದಿದ್ದಾಳೆ.

ಗಾಯಗೊಂಡಿರುವ ಯುವಕನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆ ನಡೆದ ಸ್ಥಳಕ್ಕೆ ಕೆ.ಆರ್.ಪುರಂ ಪೆÇಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.