ಕೆಲಸ ಕೊಡಿಸೋ ನೆಪದಲ್ಲಿ ಪಕ್ಕದ ಮನೆಯವರಿಂದ್ಲೇ ವೇಶ್ಯಾವಾಟಿಕೆ ಅಡ್ಡೆಗೆ ಮಹಿಳೆಯ ಮಾರಾಟ

ಚಿಕ್ಕಬಳ್ಳಾಪುರ: ಕೆಲಸ ಕೊಡಿಸುವ ನೆಪದಲ್ಲಿ ಮಹಿಳೆಯೊಬ್ಬರನ್ನ ದೆಹಲಿಯ ವೇಶ್ಯಾವಾಟಿಕೆ ಅಡ್ಡೆಗೆ ಮಾರಾಟ ಮಾಡಿದ್ದ ಪ್ರಕರಣವೊಂದು 3 ವರ್ಷಗಳ ನಂತರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ.

ಪಟ್ಟಣದ ಒಂದನೇ ವಾರ್ಡಿನ ನಿವಾಸಿ ಹಸೀನಾ (ಹೆಸರು ಬದಲಾಯಿಸಿದೆ) ಎಂಬವರೇ ಮಾರಟಕ್ಕೊಳಗಾದ ಮಹಿಳೆ. ಹಸೀನಾ ಮನೆಯ ಪಕ್ಕದ ನಿವಾಸಿಗಳಾದ ರಾಜಣ್ಣ, ಸುಶೀಲಮ್ಮ ಹಾಗೂ ನರಸಮ್ಮ ಎಂಬ ಮೂವರು ಸೇರಿ ಮೂರು ವರ್ಷಗಳ ಹಿಂದೆ ದೆಹಲಿಯ ವೇಶ್ಯಾವಾಟಿಕೆ ಅಡ್ಡೆಗೆ ಮಾರಾಟ ಮಾಡಿದ್ದಾರೆ ಅಂತ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಕರವೇ ಕಾರ್ಯಕರ್ತ ಮೂರ್ತಿ ಎಂಬವರು ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಸಂಬಂಧ ತನಿಖೆ ನಡೆಸಿದ ಬಾಗೇಪಲ್ಲಿ ಪೊಲೀಸರು ಮಾರಾಟವಾಗಿದ್ದ ಮಹಿಳೆಯನ್ನ ರಕ್ಷಿಸಿ ಕರೆತಂದಿದ್ದಾರೆ.

ಸದ್ಯ ಮಹಿಳೆಗೆ ಬಾಗೇಪಲ್ಲಿ ಪೊಲೀಸರು ಸಾಂತ್ವನ ಕೇಂದ್ರದಲ್ಲಿ ಮಹಿಳೆಗೆ ಆಶ್ರಯ ಕಲ್ಪಿಸಿದ್ದಾರೆ. ಪ್ರಕರಣ ದಾಖಲಾದ ನಂತರ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಮಾರಾಟವಾಗಿದ್ದ ಮಹಿಳೆಯ ಸಂಬಂಧಿಕರು ಹಾಗೂ ಮಾರಾಟ ಮಾಡಿದ್ದ ನರಸಮ್ಮ ನಡುವೆ ಜಗಳ ನಡೆಯುತ್ತಿದ್ದ ಸಂದರ್ಭದಲ್ಲಿ ವಿಷಯ ತಿಳಿದುಕೊಂಡಿದ್ದ ಕರವೇ ಕಾರ್ಯಕರ್ತ ಮೂರ್ತಿ ದೂರು ದಾಖಲಿಸಿದ್ರು.

ಮನೆಯ ಪಕ್ಕದ ಮೂವರು ತನಗೆ ಕೆಲಸ ಕೊಡಿಸುವುದಾಗಿ ಕರೆದುಕೊಂಡು ಹೋಗಿ ದೆಹಲಿಯ ವೇಶ್ಯವಾಟಿಕೆ ಅಡ್ಡೆಗೆ ಮಾರಾಟ ಮಾಡಿದ್ದರು. ನಾನು 2 ವರ್ಷಗಳ ಕಾಲ ಅಲ್ಲೇ ಇದ್ದೆ. ನಂತರ ಅಲ್ಲಿಂದ ತಪ್ಪಿಸಿಕೊಂಡು ಬಂದು ಬೆಂಗಳೂರಿನಲ್ಲಿ ನೆಲೆಸಿದ್ದೇನೆ ಅಂತ ಪೊಲೀಸರ ಬಳಿ ಹಸೀನಾ ಹೇಳಿಕೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *