ಚರಂಡಿ ಪೈಪ್ ಹಿಡಿದು 1ನೇ ಮಹಡಿಯಿಂದ ಕೆಳಗಿಳಿದು ವೇಶ್ಯಾಗೃಹದಿಂದ ಪಾರಾದ ಯುವತಿ

ಮುಂಬೈ: ವೇಶ್ಯಾವಾಟಿಕೆಗೆ ಮಾರಲ್ಪಟ್ಟಿದ್ದ ಯುವತಿಯೊಬ್ಬರು ತನ್ನ ಧೈರ್ಯದಿಂದಾಗಿ ವೇಶ್ಯಾಗೃಹದಿಂದ ಪಾರಾಗಿ ಬಂದಿರುವ ಘಟನೆ ಮುಂಬೈನಲ್ಲಿ ನಡೆದಿದೆ.

ಇಲ್ಲಿನ ಗ್ರ್ಯಾಂಟ್ ರೋಡ್ ನ ವೇಶ್ಯಾಗೃಹದಿಂದ ಪಾರಾಗಲು ಯುವತಿ ಚರಂಡಿ ಪೈಪ್ ಹಿಡಿದು ಮೊದಲನೇ ಮಹಡಿಯಿಂದ ಇಳಿದಿದ್ದಾರೆ. 21 ವರ್ಷದ ಯುವತಿ ಬಾಂಗ್ಲಾದೇಶ ಮೂಲದವರಾಗಿದ್ದು, ಇಲ್ಲಿನ ಭಾಷೆ ಕೂಡ ಬರುತ್ತಿರಲಿಲ್ಲ. ಒಳ್ಳೇ ಸಂಬಳದ ಕೆಲಸ ಕೊಡಿಸುವ ಭರವಸೆ ನೀಡಿ ಭಾರತಕ್ಕೆ ಕರೆಸಿಕೊಂಡಿದ್ದ ವ್ಯಕ್ತಿ ಅವರನ್ನ ವೇಶ್ಯಾವಾಟಿಗೆಗೆ ಮಾರಾಟ ಮಾಡಿದ್ದ.

ಯುವತಿ ಬಾಂಗ್ಲಾದೇಶದಲ್ಲಿ ತನ್ನ ಕುಟುಂಬದೊಂದಿಗೆ ವಾಸವಿದ್ದರು. ಮುಂಬೈನಲ್ಲಿ ಒಳ್ಳೇ ಕೆಲಸ ಕೊಡಿಸುವ ಏಜೆಂಟ್ ಬಗ್ಗೆ ಆಕೆಯ ಸಂಬಂಧಿಯೊಬ್ಬರು ಹೇಳಿದ್ದರು. ಚೆನ್ನಾಗಿ ಸಂಬಳ ನೀಡೋ ಕೆಲಸ ಸಿಗುತ್ತದೆಂದು ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ಯುವತಿ ಹಡಗಿನ ಮೂಲಕ ಕೋಲ್ಕತ್ತಾಗೆ ಬಂದು ಅಲ್ಲಿಂದ ರೈಲಿನಲ್ಲಿ ಜನವರಿ 23ರಂದು ಮುಂಬೈಗೆ ಬಂದಿಳಿದಿದ್ದರು.

ಏಜೆಂಟ್ ಯುವತಿಯನ್ನ ಭೇಟಿಯಾಗಿ ಆಕೆಗೆ ಸೆಕ್ಯೂರಿಟಿ ಗಾರ್ಡ್ ಕೆಲಸ ಹುಡುಕಿರುವುದಾಗಿ ಹೇಳಿದ್ದ. ಆದ್ರೆ ಆಕೆಯನ್ನ ನೇರವಾಗಿ ಗ್ರ್ಯಾಂಟ್ ರೋಡಿನ ವೇಶ್ಯಾಗೃಹಕ್ಕೆ ಕೊಂಡೊಯ್ದಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಯುವತಿಗೆ ತಾನು ಎಲ್ಲಿದ್ದೇನೆಂಬುದು ಬೇಗನೇ ಗೊತ್ತಾಗಿತ್ತು. ಆಕೆಯನ್ನ ವೇಶ್ಯಾವಾಟಿಗೆಗೆ ದೂಡಲು ನಡೆಸಿದ ಎಲ್ಲಾ ಯತ್ನಗಳನ್ನ ಆಕೆ ಪ್ರತಿರೋಧಿಸಿದ್ದರು. ಹೀಗಾಗಿ ವೇಶ್ಯಾಗೃಹದಲ್ಲಿ ಆಕೆಯನ್ನ ಕತ್ತಲೆಕೋಣೆಯಲ್ಲಿ ಕೂಡಿಹಾಕಿ ಐದು ದಿನಗಳವರೆಗೆ ಕಿರುಕುಳ ನೀಡಲಾಗಿತ್ತು. ಇದರಿಂದ ಯುವತಿ ಹೇಳಿದಂತೆ ಕೇಳುತ್ತಾಳೆ ಎಂದುಕೊಂಡಿದ್ದರು. ಆದ್ರೆ ಯುವತಿ ಮಾತ್ರ ಎದೆಗುಂದಿರಲಿಲ್ಲ. ಐದನೇ ದಿನ ರಾತ್ರಿವರೆಗೆ ಕಾದು ಕುಳಿತ ಆಕೆ ಎಲ್ಲರೂ ಮಲಗಿದ್ದ ಸಂದರ್ಭದಲ್ಲಿ ಮನೆಯಿಂದ ಪರಾರಿಯಾಗಲು ನಿರ್ಧರಿಸಿದ್ದರು. ಹೇಗೋ ಮಾಡಿ ರೂಮಿನ ಕಿಟಕಿ ತೆರೆದಾಗ ತಾನು ಮೊದಲನೇ ಮಹಡಿಯಲ್ಲಿರುವುದು ಗೊತ್ತಾಗಿತ್ತು. ಹೀಗಾಗಿ ಚರಂಡಿ ಪೈಪ್ ಹಿಡಿದುಕೊಂಡು ಕೆಳಗಿಳಿದು ರಸ್ತೆಗೆ ಬಂದಿದ್ದಾರೆ.

ನಂತರ ಸಹಾಯ ಕೇಳಲೆಂದು ಅಲ್ಲಿ ಯಾರಾದರೂ ಇದ್ದಾರಾ ಎಂದು ಯುವತಿ ಹುಡುಕಿದ್ದರು. ಅದರಲ್ಲೂ ಆಕೆಗೆ ಬಂಗಾಳಿ ಬಿಟ್ಟರೆ ಬೇರೆ ಯಾವುದೇ ಬಾಷೆ ಮಾತನಾಡಲು ಬರುತ್ತಿರಲಿಲ್ಲ. ಆಕೆಯ ಅದೃಷ್ಟಕ್ಕೆ ಕ್ಯಾಬ್ ಚಾಲಕರೊಬ್ಬರು ಸಿಕ್ಕಿದ್ದು, ಅವರಿಗೆ ಬಂಗಾಳಿ ಗೊತ್ತಿತ್ತು. ಯುವತಿ ತನ್ನ ಸ್ಥಿತಿಯ ಬಗ್ಗೆ ವಿವರಿಸಿದಾಗ ಕ್ಯಾಬ್ ಚಾಲಕ ಕೂಡಲೇ ಅವರನ್ನು ಡಿಬಿ ಮಾರ್ಗ್ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.

ಸದ್ಯ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವೇಶ್ಯಾಗೃಹದ ಮೇಲೆ ದಾಳಿ ಮಾಡಿದರಾದ್ರೂ ಅಲ್ಲಿ ಎಲ್ಲರೂ ಪರಾರಿಯಾಗಿದ್ದರು. ಯುವತಿಯನ್ನ ಪೊಲೀಸರು ಪುರ್ನರ್ವತಿ ಕೇಂದ್ರಕ್ಕೆ ಕಳಿಸಿದ್ದಾರೆ. ಆರೋಪಿ ಗ್ಯಾಂಗ್ ಗಾಗಿ ಬಲೆ ಬೀಸಿದ್ದಾರೆ.

Comments

Leave a Reply

Your email address will not be published. Required fields are marked *