ಏಕಾಏಕಿ ಎದ್ದುನಿಂತು ಪ್ರಶ್ನೆ ಕೇಳುವ ಮೂಲಕ ಸಚಿವ ಹೆಗ್ಡೆಯವರನ್ನು ತಬ್ಬಿಬ್ಬು ಮಾಡಿದ ವಯೋವೃದ್ಧೆ!

ಕಾರವಾರ: ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ವಯೋವೃದ್ಧೆಯೊಬ್ಬರು ಏಕಾಏಕಿಯಾಗಿ ಎದ್ದು ನಿಂತು ಪ್ರಶ್ನೆ ಕೇಳುವ ಮೂಲಕ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆಯವರನ್ನು ತಬ್ಬಿಬ್ಬು ಮಾಡಿದ ಘಟನೆ ಅಂಕೋಲದಲ್ಲಿ ನಡೆದಿದೆ.

ಜನಸುರಕ್ಷಾ ಯಾತ್ರೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಚಿವರು ವೇದಿಕೆ ಮೇಲೆ ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಕೊಲೆ, ಸುಲಿಗೆ, ಅತ್ಯಾಚಾರ ಪ್ರಕರಣ ಹಾಗೂ ಈಗಿರುವ ಕಾಂಗ್ರೆಸ್ ಸರ್ಕಾರ ದಲ್ಲಿ ಆದ ಕೊಲೆ, ಸುಲಿಗೆ, ಅತ್ಯಾಚಾರ ಪ್ರಕರಣ ಕುರಿತು ಅಂಕಿ ಅಂಶಗಳನ್ನು ನೀಡಿ ಸಿದ್ದರಾಮಯ್ಯ ಸರ್ಕಾರವನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಳ್ಳುತ್ತಿದ್ದರು.

ಈ ವೇಳೆ ನಾನು ಉತ್ತರ ಕೊಡುತ್ತೇನೆ ಎಂದು ಹೇಳುವ ಮೂಲಕ ವಯೋವೃದ್ಧೆಯೊಬ್ಬರು ದಿಢೀರ್ ಎದ್ದು ನಿಂತು ತಬ್ಬಿಬ್ಬು ಮಾಡಿದ್ದಾರೆ. ಅಂಕೋಲದ ಹಟ್ಟೀಕೇರಿ ನಿವಾಸಿ ಸುಶೀಲ ನಾಯ್ಕ ಎಂಬವರೇ ಅನಂತಕುಮಾರ್ ಹೆಗ್ಡೆ ಅವರು ಕಾಂಗ್ರೆಸ್‍ಗೆ ಅಂಕಿ ಅಂಶದ ಸಮೇತ ಹಾಕಿದ ಪ್ರಶ್ನೆಗೆ ಉತ್ತರ ನೀಡುವುದಾಗಿ ಹೇಳಿದ್ದಾರೆ.

ಸಭೆಯಲ್ಲಿ ಏಕಾಏಕಿ ಎದ್ದುನಿಂತು ನೀವು ಹಾಕಿದ ಪ್ರಶ್ನೆಗೆ ನಾನು ಉತ್ತರಿಸುತ್ತೇನೆ, ನಾನು ಕೇಳುವ ಪ್ರಶ್ನೆಗೆ ನೀವು ಉತ್ತರಿಸಿ ಎಂದು ವೃದ್ಧ ಮಹಿಳೆ ಹೇಳುತ್ತಿರುವಂತೆ ಕಾರ್ಯಕ್ರಮ ಸ್ಥಳದಿಂದ ವೃದ್ಧ ಮಹಿಳೆಯನ್ನು ಸಮಾಧಾನಪಡಿಸಿ ಮಹಿಳಾ ಪೊಲೀಸ್ ಸಿಬ್ಬಂದಿ ಹಾಗೂ ಬಿಜೆಪಿ ಕಾರ್ಯಕರ್ತರು ಕರೆದೊಯ್ದರು. ನಂತರ ಕಾರ್ಯಕ್ರಮಕ್ಕೆ ಆಗಮಿಸಿದ್ದ ವಯೋವೃದ್ಧೆಯ ಪತಿಯನ್ನು ಅನಂತಕುಮಾರ್ ಹೆಗಡೆ ಮಾತನಾಡಿಸಿ ಈ ಪ್ರಹಸನಕ್ಕೆ ತೆರೆ ಎಳೆದರು.

https://www.youtube.com/watch?v=LO8g8ZnIxCY

Comments

Leave a Reply

Your email address will not be published. Required fields are marked *