ಮದ್ವೆ ಮಾತುಕತೆಗೆಂದು ಕರೆದು ಅರೆಸ್ಟ್ ಮಾಡಿದ ಮಹಿಳಾ ಪೊಲೀಸ್

– ಮಹಿಳೆಯ ಐಡಿಯಾಕ್ಕೆ ಪ್ರಶಂಸೆಯ ಸುರಿಮಳೆ

ಭೋಪಾಲ್: ಸಾಮಾನ್ಯವಾಗಿ ಕಾಲಿಗೆ ಗುಂಡೇಟು ನೀಡಿ ಆರೋಪಿಗಳನ್ನು ಪೊಲೀಸರು ಬಂಧಿಸುತ್ತಾರೆ. ಆದರೆ ಇಲ್ಲೊಬ್ಬರು ಮಹಿಳಾ ಪೊಲೀಸ್ ಕೊಲೆ ಆರೋಪಿಯನ್ನು ಹಿಡಿಯಲು ಪ್ಲಾನ್ ಮಾಡಿದ್ದು, ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಹೌದು. ಮಧ್ಯಪ್ರದೇಶದ ಛತ್ತಾರ್ ಪುರ ನೌಗಾಂವ್ ಬ್ಲಾಕ್ ನ ಗರೋಲಿ ಚೌಕಿಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮಾಧವಿ ಅಗ್ನಿಹೋತ್ರಿ ಅವರು ಮದುವೆ ಮಾತುಕತೆಗೆಂದು ಕರೆದು ಆರೋಪಿಯನ್ನು ಬಂಧಿಸಿದ್ದು, ಎಲ್ಲರ ಪ್ರಶಂಸೆಗೆ ಕಾರಣರಾಗಿದ್ದಾರೆ.

ಬಾಲಕೃಷ್ಣ ಚೌಬೆ(55) ಎಂಬಾತ ಕಳೆದ ಮೂರು ವರ್ಷಗಳಿಂದ ಮಧ್ಯಪ್ರದೇಶದ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದನು. ಈತ ಕೊಲೆ ಮತ್ತು ದರೋಡೆ ಕೇಸಿನಲ್ಲಿ ಗುರುತಿಸಿಕೊಂಡ ಬಳಿಕ ತನ್ನ ಗ್ರಾಮದಿಂದ ತಲೆಮರೆಸಿಕೊಂಡಿದ್ದನು. ಅದರಲ್ಲೂ ಕೊಲೆ ಪ್ರಕರಣದ ಬಳಿಕ ಬಾಲಕೃಷ್ಣ ಉತ್ತರಪ್ರದೇಶಕ್ಕೆ ಹಾರಿದ್ದನು.

ಆರೋಪಿಯನ್ನು ಹಿಡಿಯಲು ಪೊಲೀಸರು ಹಲವು ಬಾರಿ ಪ್ರಯತ್ನಿಸಿದರೂ ವಿಫಲರಾಗುತ್ತಿದ್ದರು. ಹೀಗೆ ಹಲವು ತಿಂಗಳು ಪೊಲೀಸರಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದ ಬಾಲಕೃಷ್ಣ, ಒಂದು ದಿನ ತನ್ನ ಪರಿಚಯಸ್ಥರಿಗೆ ಮೆಸೇಜ್ ಮಾಡಿದ್ದಾನೆ. ತನಗೆ ಮದುವೆಯಾಗಬೇಕು, ಹುಡುಗಿ ಹುಡುಕಿ ಎಂದು ಸಂದೇಶದಲ್ಲಿ ತಿಳಿಸಿದ್ದನು.

ಈ ವಿಚಾರ ತಿಳಿದು ನೌಗಾಂವ್ ಬ್ಲಾಕ್ ನ ಗರೋಲಿ ಚೌಕಿಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮಾಧವಿ ಅಗ್ನಿಹೋತ್ರಿ ಅವರು ಆರೋಪಿಯನ್ನು ಕರೆತರುವ ಜಾವಾಬ್ದಾರಿಯನ್ನು ಹೊತ್ತುಕೊಂಡರು. ಅಂತೆಯೇ ಮೂವತ್ತರ ಹರೆಯದ ಮಾಧವಿ ಒಂದೊಳ್ಳೆ ಉಪಾಯವನ್ನು ಕಂಡುಕೊಂಡು ತನ್ನ ಹಳೆಯ ಫೋಟೋವೊಂದನ್ನು ಮಾಹಿತಿ ನಿಡಿದವರ ಮೂಲಕ ಬಾಲಕೃಷ್ಣಗೆ ಕಳುಹಿಸಿ ಮದುವೆ ಪ್ರಸ್ತಾಪವನ್ನು ಮುಂದಿಡುವ ಐಡಿಯಾವನ್ನು ತಿಳಿಸಿದರು.

ಮಾಧವಿಯ ಅದ್ಭುತ ಉಪಾಯಕ್ಕೆ ಪೊಲೀಸ್ ಉಪವಿಭಾಗಾಧಿಕಾರಿ(ಎಸ್‍ಡಿಓಪಿ) ಶ್ರೀನಾಥ್ ಸಿಂಗ್ ಬಗೇಲ್ ತಲೆದೂಗಿದರು. ಅಲ್ಲದೆ ಮಾಧ್ವಿ ಸಹಾಯಕ್ಕಾಗಿ ಎಸ್ ಐ ಅತುಲ್ ಝಾ, ಮನೋಜ್ ಯಾದವ್, ಎಎಸ್‍ಐ ಗ್ಯಾನ್ ಸಿಂಗ್ ಹಾಗೂ ಇತರ ಮೂವರು ಪೊಲೀಸ್ ಸಿಬ್ಬಂದಿಯನ್ನು ನೇಮಿಸುವ ಮೂಲಕ ಆರೋಪಿಯ ಪತ್ತೆಗೆ ತಂಡ ರಚಿಸಿದರು.

ಇತ್ತ ಗುರುವಾರ ಉತ್ತರಪ್ರದೇಶದ ಬಿಜೋರಿ ಗ್ರಾಮಕ್ಕೆ ಬಂದು ಭೇಟಿಯಾಗುವಂತೆ ಬಾಲಕೃಷ್ಣ, ಮಾಧವಿ ಅಗ್ನಿಹೋತ್ರಿಯವರನ್ನು ಆಹ್ವಾನಿಸಿದ್ದಾನೆ. ಹಾಗೆಯೇ ಭೇಟಿಗೆ ಬಂದ ಮಾಧವಿ, ಆರೋಪಿ ತನ್ನನ್ನು ಭೇಟಿಯಾಗಲು ಬರುತ್ತಿದ್ದಂತೆಯೇ ತಂಡಕ್ಕೆ ಸೂಚನೆ ನೀಡಿದರು. ಹಾಗೆಯೇ ತಂಡ ಆತನನ್ನು ಅರೆಸ್ಟ್ ಮಾಡಿತು. ಶುಕ್ರವಾರ ಪೊಲಿಸರು ಆರೋಪಿಯನ್ನು ಜೈಲಿಗಟ್ಟಿದ್ದಾರೆ.

Comments

Leave a Reply

Your email address will not be published. Required fields are marked *