30 ವರ್ಷಗಳಿಂದ ತಾಯಿಯ ಮೃತದೇಹದ ಜೊತೆ ವಾಸಿಸುತ್ತಿದ್ದ ಮಹಿಳೆ

ಕೀವ್: ಮೃತದೇಹವನ್ನ ಮನೆಯ ಮುಂದೆ ಅಥವಾ ಮನೆಯ ಒಳಗೆಯೇ ಸಮಾಧಿ ಮಾಡಿರೋ ಸಾಕಷ್ಟು ಉದಾಹರಣೆಗಳಿವೆ. ಆದ್ರೆ ಇಲ್ಲೊಬ್ಬರು ಮಹಿಳೆ ತನ್ನ ತಾಯಿಯ ಮೃತದೇಹವನ್ನ ಮಣ್ಣು ಮಾಡದೆ ಮನೆಯಲ್ಲೇ ಇಟ್ಟುಕೊಂಡು ಅದರೊಂದಿಗೆ ಸುಮಾರು 30 ವರ್ಷಗಳಿಂದ ವಾಸಿಸುತ್ತಿದ್ದರು ಅಂದರೆ ನೀವು ನಂಬಲೇಬೇಕು.

ಉಕ್ರೇನ್ ನ 77 ವರ್ಷದ ಮಹಿಳೆ ತನ್ನ ತಾಯಿಯ ಮೃತದೇಹವನ್ನ ಕನಿಷ್ಟವಾದ್ರೂ 30 ವರ್ಷಗಳಿಂದ ಮನೆಯಲ್ಲಿ ಇಟ್ಟುಕೊಂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಇಲ್ಲಿನ ಮೈಕೋಲೇವ್ ನಗರದಲ್ಲಿ ಈ ಮಹಿಳೆ ವಾಸವಿದ್ದು, ನೆರೆಮನೆಯವರೊಬ್ಬರು ಫೋನ್ ಮಾಡಿ ಪೊಲೀಸರಿಗೆ ವಿಷಯ ತಿಳಿಸಿದ್ದರು. ಪೊಲೀಸರು ಆ ವಿಳಾಸಕ್ಕೆ ಹೋಗಿ ನೋಡಿದಾಗ ಮಹಿಳೆಯ ಮನೆಯ ತುಂಬಾ ಕಸ ಹಾಗೂ ದಿನಪತ್ರಿಕೆಗಳ ರಾಶಿ ಬಿದ್ದಿತ್ತು. ಮೃತದೇಹವನ್ನ ಸೋಫಾ ಮೇಲೆ ಮಲಗಿಸಲಾಗಿತ್ತು. ಮೃತದೇಹ ಸಂರಕ್ಷಿತ ಸ್ಥತಿಯಲ್ಲಿತ್ತು. ದೇಹದ ಮೇಲೆ ಬಿಳಿ ಬಣ್ಣದ ವಸ್ತ್ರವಿದ್ದು, ಕಾಲುಗಳಿಗೆ ಹಸಿರು ಬಣ್ಣದ ಸಾಕ್ಸ್ ಮತ್ತು ನೀಲಿ ಬಣ್ಣದ ಶೂ ಹಾಕಲಾಗಿತ್ತು.

ಮೃತರ ಮಗಳು ಈಗ ವೃದ್ಧೆಯಾಗಿದ್ದು, ಜೀವಂತವಾಗಿದ್ದರು. ಆದ್ರೆ ಅವರ ಎರಡೂ ಕಾಲುಗಳು ಪಾಶ್ರ್ವವಾಯುವಿಗೆ ಈಡಾಗಿದ್ದವು. ಮಹಿಳೆ ನೆಲದ ಮೇಲೆ ಕುಳಿತ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರ ಮನೆಯಲ್ಲಿ ನೀರು, ಗ್ಯಾಸ್ ಮತ್ತು ವಿದ್ಯುತ್ ಪೂರೈಕೆಯೂ ಇರಲಿಲ್ಲ.

77 ವರ್ಷದ ಮಹಿಳೆಯನ್ನು ರಕ್ಷಣೆ ಮಾಡುವ ಸಲುವಾಗಿ ಫ್ಲ್ಯಾಟ್ ಒಳಗೆ ಪ್ರವೇಶಿಸಲು ಅಧಿಕಾರಿಗಳು ರಕ್ಷಣಾ ಸಿಬ್ಬಂದಿಯನ್ನ ಕರೆಸಿದರು. ಒಂದು ರೂಮಿನಲ್ಲಿ ಮಹಿಳೆ ಕಸದ ರಾಶಿಯ ನಡುವೆ ನೆಲದ ಮೇಲೆ ಕುಳಿತ ಸ್ಥಿತಿಯಲಿದ್ದರು. ಅವರು ನಡೆದಾಡಲು ಸಾಧ್ಯವಾಗದ ಸ್ಥಿತಿಯಲ್ಲಿದ್ದರಿಂದ ತುರ್ತು ಸಹಾಯ ಬೇಕಾಗಿತ್ತು. ಹೀಗಾಗಿ ಅವರಿಗಾಗಿ ಆಂಬುಲೆನ್ಸ್ ಕರೆಸಲಾಯಿತು. ಬೇರೆ ರೂಮ್‍ಗಳನ್ನ ಪರಿಶೀಲಿಸಿಸಾಗ ಮತ್ತೊಬ್ಬ ಮಹಿಳೆಯ ಮೃದೇಹ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಮಹಿಳೆ ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದರು. ನೆರೆಹೊರೆಯವರೊಂದಿಗೆ ಮಾತನಾಡುತ್ತಿರಲಿಲ್ಲ. ಅವರ ಮನೆಯ ಮುಂಬಾಗಿಲನ್ನ ತೆರೆದೇ ಇರಲಿಲ್ಲ. ಆದರೂ ನೆರೆಹೊರೆಯವರು ಅವರ ಆರೈಕೆ ಮಾಡುತ್ತಿದ್ದರು. ಮಹಿಳೆಗಾಗಿ ಮನೆ ಮುಂದೆ ಊಟ ಇಟ್ಟು ಹೋಗುತ್ತಿದ್ದರು. ಮಹಿಳೆ ತನ್ನ ತಾಯಿಯ ಮೃತದೇಹದೊಂದಿಗೆ ವಾಸಿಸುತ್ತಿದ್ದಾರೆ ಎಂದು ಯಾರೂ ಊಹಿಸಿರಲಿಲ್ಲ. ಈಗ ಮೃತದೇಹವನ್ನ ಅಲ್ಲಿಂದ ತೆರವುಗಳಿಸಿ ವಿಧಿವಿಜ್ಞಾನ ಪರೀಕ್ಷೆಗೆ ಕಳಸಲಾಗಿದೆ. ಮಹಿಳೆ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ಮಾಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *