6 ಮಂದಿ ಯುವಕರೊಂದಿಗೆ ಸೇರಿ ಪತಿಯನ್ನೇ ಕಿಡ್ನಾಪ್ ಮಾಡಿದ್ಳು

ದಾವಣಗೆರೆ: ಆರು ಮಂದಿ ಯುವಕರ ಜೊತೆ ಸೇರಿ ಕಟ್ಟಿಕೊಂಡ ಗಂಡನನ್ನೇ ಪತ್ನಿ ಕಿಡ್ನಾಪ್ ಮಾಡಿದ ಘಟನೆ ದಾವಣಗೆರೆ ತಾಲೂಕು ಲೋಕಿಕೆರೆ ಗ್ರಾಮದಲ್ಲಿ ನಡೆದಿದೆ.

ಪತಿ ಶ್ರೀನಿವಾಸ್(41)ನನ್ನು ಕಿಡ್ನಾಪ್ ಮಾಡಿದ ಆರೋಪದ ಮೇಲೆ ಪತ್ನಿ ಸಂಗೀತಾಳ(29)ನ್ನು ಹದಡಿ ಪೊಲೀಸರು ಬಂಧಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಪತಿ-ಪತ್ನಿ ದೂರವಿದ್ದು, ಹಣದ ಆಸೆಗೆ ಕಟ್ಟಿಕೊಂಡ ಗಂಡನನ್ನು ಯುವಕರ ಜೊತೆ ಸೇರಿ ಕಿಡ್ನಾಪ್ ಮಾಡಿದ್ದಾಳೆ.

ಪತ್ನಿ ಸಂಗೀತಾಳ ನಡವಳಿಕೆ ಸರಿ ಇಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಶ್ರೀನಿವಾಸ್ ಸಂಗೀತಾಳಿಂದ ದೂರವಿದ್ದು, ಜಮೀನು ಹಾಗೂ ಪೆಟ್ರೋಲ್ ಬಂಕ್ ನೋಡಿಕೊಂಡಿದ್ದರು. ಹೀಗೆ ಗಂಡನಿಂದ ದೂರವಿದ್ದ ಸಂಗೀತಾ ಕೆಲ ದಿನಗಳ ಹಿಂದೆ ಪಿಎಸ್‍ಐ ಒಬ್ಬರ ಜೊತೆ ಗಲಾಟೆ ಮಾಡಿಕೊಂಡು ವಿಷವನ್ನು ಕುಡಿಸಿದ್ದರು ಎಂದು ಹೇಳಿ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲು ಕೂಡ ಏರಿದ್ದು ಪ್ರಕರಣ ಈಗಲೂ ಸಹ ನಡೆಯುತ್ತಿದೆ. ಆದರೆ ಈಗ ಹಣದ ಅವಶ್ಯಕತೆಯ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳ ಹಿಂದೆ ಸಂಗೀತಾ ಹಾಗೂ 6 ಜನ ಸಹಚರರು ಸೇರಿ ಶ್ರೀನಿವಾಸ್ ನನ್ನು ಕಿಡ್ನಾಪ್ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಪ್ರತಿನಿತ್ಯದಂತೆ ಶ್ರೀನಿವಾಸ್ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮುಗಿಸಿ ಮನೆಗೆ ವಾಪಸ್ ಬರುವಾಗ ಕಿಡ್ನಾಪ್ ಮಾಡಿದ್ದರು. ಈ ಸಂಬಂಧ ದೂರು ದಾಖಲಿಸಿಕೊಂಡಿದ್ದ ಹದಡಿ ಪೊಲೀಸರು, ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಂಗೀತಾ ಹಾಗೂ ಇಬ್ಬರನ್ನು ಬಂಧಿಸಿದ್ದು, ಉಳಿದ ನಾಲ್ವರು ಪರಾರಿಯಾಗಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Comments

Leave a Reply

Your email address will not be published. Required fields are marked *