ಶಾಸಕ ಅಭಯಚಂದ್ರ ಜೈನ್ ಕಾರು ಮಹಿಳೆಗೆ ಡಿಕ್ಕಿ – ಪ್ರಶ್ನಿಸಿದ್ದಕ್ಕೆ ಮನ ಬಂದಂತೆ ನಿಂದಿಸಿದ್ರಂತೆ!

ಮಂಗಳೂರು: ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಅಭಯಚಂದ್ರ ಜೈನ್ ಅವರ ಕಾರು ವೃದ್ಧೆಗೆ ಡಿಕ್ಕಿಯಾದ ಘಟನೆ ಮಂಗಳೂರಿನ ಬಜ್ಪೆಯಲ್ಲಿ ನಡೆದಿದೆ.

ಬಜ್ಪೆ ಸಮೀಪದ ಕಿನ್ನಿಪದವು ಮುಖ್ಯ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ 48 ವರ್ಷದ ವೃದ್ಧ ಮಹಿಳೆ ಜೈನಾಬಿ ಎಂಬವರಿಗೆ ಅತಿ ವೇಗದಿಂದ ಬಂದ ಮಾಜಿ ಮಂತ್ರಿ ಮತ್ತು ಮೂಲ್ಕಿ ಮೂಡಬಿದ್ರೆ ಶಾಸಕ ಅಭಯಚಂದ್ರ ಜೈನ್ ಅವರ ಕಾರು ಡಿಕ್ಕಿಯಾಗಿದೆ. ಡಿಕ್ಕಿ ಹೊಡೆದ ತೀವ್ರತೆಗೆ ರಸ್ತೆ ಬದಿಯಿಂದ ಚರಂಡಿಗೆ ಎಸೆಯಲ್ಪಟ್ಟ ಜೈನಾಬಿ ನಂತರ ಸಾವರಿಸಿಕೊಂಡು ಎದ್ದು ಬಂದು ಕಾರಿನೊಳಗಿದ್ದ ಅಭಯಚಂದ್ರ ಅವರಲ್ಲಿ, ಸಾವಧಾನದಿಂದ ಕಾರು ಚಲಾಯಿಸಬಾರದೇ ಎಂದು ಕೇಳಿದ್ದಾರೆ. ಆಗ ತಾನೋರ್ವ ಜನಪ್ರತಿನಿಧಿ ಎಂಬುದನ್ನೂ ಮರೆತು, ಓರ್ವ ಲೋಕಲ್ ಗೂಂಡಾಗಳಂತೆ ಮಹಿಳೆಯ ಮೇಲೆ ಎರಗಿ ಹೋಗಿದ್ದಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಕಾರು ಚಲಾಯಿಸಲು ನಿನ್ನಿಂದ ಕಲಿಯಬೇಕಾಗಿಲ್ಲವೆನ್ನುತ್ತಾ ಆಕೆಯನ್ನು ತನ್ನ ಕೈಯಿಂದ ತಳ್ಳಿ ಹಾಕಿದ್ದಾರೆ. ನಿನ್ನ ಕಣ್ಣು ಒಡೆದಿದೆಯಾ ಎಂದು ತಳ್ಳಿದ್ದಾರೆ. ಮತ್ತೊಮ್ಮೆ ರಸ್ತೆಗೆಸೆಯಲ್ಪಟ್ಟ ಮಹಿಳೆಗೆ ತೀವ್ರ ತರಹದ ಗಾಯಗಳಾಗಿದ್ದು, ಅವರು ಈಗ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಮಹಿಳೆ ಪೊಲೀಸ್ ಗೆ ದೂರು ನೀಡುತ್ತೇನೆ ಎಂದು ಹೇಳಿಕ್ಕೆ ನಿನ್ನ ಅಪ್ಪನಲ್ಲಿ ದೂರು ಕೊಡು ಎಂದಿದ್ದಾರಂತೆ. ಓರ್ವ ಜನಪ್ರತಿನಿಧಿಯಾದವನು ಜನಸಾಮಾನ್ಯರೊಂದಿಗೆ ಅದರಲ್ಲೂ ಓರ್ವ ವೃದ್ಧ ಮಹಿಳೆಯ ಮೇಲೆ ಈ ರೀತಿಯೂ ವರ್ತಿಸಬಹುದೇ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದೇ ಮೊದಲಲ್ಲ: ಅಭಯಚಂದ್ರ ಅವರ ಈ ರೀತಿಯ ರೌದ್ರಾವತಾರ ಇದು ಮೊದಲ ಬಾರಿಯೇನಲ್ಲ. ಕಳೆದ ಬಾರಿ ಮೂಲ್ಕಿಯಲ್ಲಿ ಓರ್ವ ಬಡ ರಿಕ್ಷಾ ಚಾಲಕನ ಮೇಲೆ ಎರಗಿ ಹೋಗಿದ್ದರು. ಹಾಗೆಯೇ ಮೂರು ತಿಂಗಳ ಮೊದಲು ಮೂಡಬಿದ್ರೆಯಲ್ಲಿ ಕಳಪೆ ಕಾಮಗಾರಿಯ ಕುರಿತು ಪ್ರಶ್ನಿಸಿದ ವೃದ್ಧ ಮಹಿಳೆಯನ್ನು ಏಕ ವಚನದಲ್ಲಿ ನಿಂದಿಸಿದ್ದರು.

 

Comments

Leave a Reply

Your email address will not be published. Required fields are marked *