ಮನೆಯ ಹಿತ್ತಲಲ್ಲಿ ಅಸ್ಥಿಪಂಜರ ಪತ್ತೆ: ಮಗ ಬೇಕೆಂದು 10 ಮಕ್ಕಳನ್ನು ಅಪಹರಿಸಿದ ಆರೋಪ- ತಾಯಿ, ಮಗಳು ಅರೆಸ್ಟ್

ಗಾಂಧಿನಗರ: 10 ಮಕ್ಕಳ ಅಪಹರಣ ಆರೋಪದ ಮೇಲೆ 40 ವರ್ಷದ ಮಹಿಳೆ ಮತ್ತು ಆಕೆಯ ಮಗಳನ್ನು ಪೊಲೀಸರು ಬಂಧಿಸಿದ ಘಟನೆ ಗುಜರಾತ್ ನ ಅಂಕಲೇಶ್ವರ ಪಟ್ಟಣದಲ್ಲಿ ನಡೆದಿದೆ.

ರಶೀದಾ ಪಟೇಲ್(40) ಮತ್ತು ಮೊಹ್ಸಿನಾ(19) ಬಂಧಿತ ಆರೋಪಿಗಳಾಗಿದ್ದಾರೆ. ಭರೂಚ್ ನ ಅಂಕೆಲೆಶ್ವರ್ ಪೊಲೀಸರು ರಶೀದಾ ಮನೆಯನ್ನು ಪರಿಶೀಲಿಸಿದಾಗ ಮನೆಯ ಹಿಂಭಾಗದಲ್ಲಿ ಬಾಲಕನ ಅಸ್ಥಿಪಂಜರ ಸಿಕ್ಕಿದೆ. ಆದ್ದರಿಂದ ಇವರನ್ನು ಗುರುವಾರ ಕೊಲೆ ಆರೋಪದ ಮೇರೆಗೆ ಪೊಲೀಸರು ಬಂಧಿಸಿದ್ದಾರೆ.

ರಶೀದಾ ಮನೆಯಲ್ಲಿ ದೊರೆತ ಅಸ್ಥಿಪಂಜರವು ಏಳು ವರ್ಷದ ವಿಕಿ ದೇವಿಪುಜಾಕ್ ಎಂಬ ಬಾಲಕನದ್ದು ಎಂದು ತಿಳಿದಿಬಂದಿದೆ. ಈ ಬಾಲಕ 2016ರ ಮಾರ್ಚ್ ನಲ್ಲಿ ನಗರದ ಗುರುದ್ವಾರ ಪ್ರದೇಶದ ತನ್ನ ಮನೆಯಿಂದ ಕಾಣೆಯಾಗಿದ್ದ. ಬಾಲಕನ ಸಾವಿಗೆ ಕಾರಣ ತಿಳಿಯಲು ದೇಹದ ಅವಶೇಷಗಳನ್ನು ಫೋರೆನ್ಸಿಕ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಜೆಜಿ ಅಮಿತ್ ಹೇಳಿದ್ದಾರೆ.

ಆದ್ರೆ ಬಾಲಕ ಕೀಟನಾಶಕ ಸೇವಿಸಿ ಸಾವನ್ನಪ್ಪಿದ್ದ ಎಂದು ರಶೀದಾ ಹೇಳಿದ್ದಾಳೆ. ಈ ಸಂಬಂಧ ಪೊಲೀಸರು ರಶಿದಾಳನ್ನು ವಿಚಾರಣೆಗೆ ಒಳಪಡಿಸಿದಾಗ ಈಕೆಯ ಗಂಡು ಮಗು ಹಲವು ವರ್ಷಗಳ ಹಿಂದೆ ತೀರಿಕೊಂಡಿತ್ತು ಎಂದು ತಿಳಿದುಬಂದಿದೆ. ತನ್ನ ಕೊನೆಗಾಲದಲ್ಲಿ ನೋಡಿಕೊಳ್ಳಲು ಮಗ ಬೇಕೆಂದು ರಶೀದಾ ಈ ಕೃತ್ಯವೆಸಗಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

ಮಾರ್ಚ್ 17 ರಂದು ರಶೀದಾ ಪಟೇಲ್ ಮತ್ತು ಮೊಹ್ಸಿನಾಳನ್ನು ಬಾಲಕನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದರು. 2017ರ ನವೆಂಬರ್ 17ರಂದು ಮೋಹಿತ್ ಪಾಸ್ವಾನ್ ಎಂಬ 7 ವರ್ಷದ ಬಾಲಕ ಕಾಣೆಯಾಗಿದ್ದ. ರಶೀದಾ ಬಾಲಕನನ್ನ ತನ್ನ ಮನೆಯಲ್ಲಿ ಕೂಡಿಹಾಕಿದ್ದಳು. ಆದರೆ ಅವನು 4 ತಿಂಗಳ ಬಳಿಕ ಅಲ್ಲಿಂದ ತಪ್ಪಿಸಿಕೊಂಡು ಬಂದು ತನ್ನ ಪೋಷಕರಿಗೆ ರಶೀದಾ ಬಗ್ಗೆ ವಿವರಿಸಿ, ಆಕೆ ನನಗೆ ಹೊಡೆಯುತ್ತಿದ್ದಳೆಂದು ತಿಳಿಸಿದ್ದನು. ನಂತರ ಬಾಲಕನ ತಂದೆ ರಶೀದಾ ಮತ್ತು ಮಗಳ ಮೇಲೆ ದೂರು ನೀಡಿದ್ದರು. ದೂರಿನನ್ವಯ ಪೊಲೀಸರು ತನಿಖೆ ನಡೆಸಿದಾಗ ರಶೀದಾ ಮನೆಯ ಹಿತ್ತಲಿನಲ್ಲಿ ಅಸ್ಥಿಪಂಜರ ಪತ್ತೆಯಾಗಿದೆ.

2017ರಲ್ಲಿ ಭರೂಚ್‍ನಲ್ಲಿ ಇನ್ನೂ 8 ಮಕ್ಕಳು ಕಾಣೆಯಾಗಿದ್ದು, ಇದರ ಹಿಂದೆ ರಶೀದಾ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದು, ಸದ್ಯ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.

Comments

Leave a Reply

Your email address will not be published. Required fields are marked *