ತುಮಕೂರಿನ ಗುಬ್ಬಿ ತಹಶೀಲ್ದಾರ್ ಎದುರೇ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

ತುಮಕೂರು: ಗೋಮಾಳ ಒತ್ತುವರಿ ತೆರವನ್ನು ವಿರೋಧಿಸಿದ ರೈತ ಮಹಿಳೆಯೊಬ್ಬರು ತಹಶೀಲ್ದಾರ್ ಎದುರೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಅರಿವೆಸಂದ್ರ ಗ್ರಾಮದಲ್ಲಿ ನಡೆದಿದೆ.

ರೇಣುಕಮ್ಮ ಎಂಬವರೇ ಆತ್ಮಹತ್ಯೆಗೆ ಯತ್ನಿಸಿದ ರೈತ ಮಹಿಳೆ. ಅರಿವೆಸಂದ್ರ ಗ್ರಾಮದ ಸರ್ವೆ ನಂಬರ್ 13 ರಲ್ಲಿನ ಗೋಮಾಳದಲ್ಲಿ 12 ಕ್ಕೂ ಹೆಚ್ಚು ರೈತರು ಒತ್ತುವರಿ ಮಾಡಿಕೊಂಡು ಜಮಿನು ತೋಟ ನಿರ್ಮಿಸಿಕೊಂಡಿದ್ದರು. ಅದರಲ್ಲಿ ನಾಲ್ಕು ಜನ ರೈತರನ್ನು ಬಿಟ್ಟು ಉಳಿದವರು ಒತ್ತುವರಿ ಜಾಗವನ್ನು ಸಕ್ರಮ ಮಾಡಿಕೊಂಡಿದ್ದರು. ರೇಣುಕಮ್ಮ ಸೇರಿದಂತೆ ಸಕ್ರಮಕ್ಕೆ ಅರ್ಜಿಯನ್ನೂ ಹಾಕದೇ ನಿರ್ಲಕ್ಷ ತೋರಿದ್ದರು. ಆದರೆ ಈ ಕುರಿತು ಹೈಕೋರ್ಟ್ ಗೋಮಾಳವನ್ನು ತೆರವುಗೊಳಿಸುವಂತೆ ಆದೇಶ ನೀಡಿತ್ತು.

ಹೈಕೋರ್ಟ್ ಆದೇಶದಂತೆ ಪೊಲೀಸರ ಭದ್ರತೆಯೊಂದಿಗೆ ತಹಶೀಲ್ದಾರ್ ಮೋಹನ್ ಕುಮಾರ್ ತಂಡ ತೆರವು ಕಾರ್ಯಾಚರಣೆ ಆರಂಭಿಸಿತ್ತು. ಇದರಿಂದ ಕಳೆದ 20 ವರ್ಷಗಳಿಂದ ಒತ್ತುವರಿ ಜಾಗದಲ್ಲಿದ್ದ ತೋಟದಿಂದಲೇ ಜೀವನ ಸಾಗಿಸುತ್ತಾ ಇದ್ದ ವಿಧವೆ ರೇಣುಕಮ್ಮ ಅವರಿಗೆ ಆತಂಕ ಉಂಟಾಗಿ ತಹಶೀಲ್ದಾರ್ ಎದುರೇ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ.

ತಕ್ಷಣ ತಹಶೀಲ್ದಾರ್ ಹಾಗೂ ಪೊಲೀಸರು ರೇಣುಕಮ್ಮಳನ್ನು ರಕ್ಷಿಸಿದ್ದಾರೆ. ಈ ವೇಳೆ ಒತ್ತುವರಿ ತೆರವುಗೊಳಿಸಲು ಬಂದ ಅಧಿಕಾರಿಗಳು ಹಾಗೂ ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆದು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

Comments

Leave a Reply

Your email address will not be published. Required fields are marked *