ಡಿಸಿ ಆದೇಶಿಸಿದ್ದರೂ ಫೈನಾನ್ಸ್ ನಿಂದ ಕಿರುಕುಳ- ಗೃಹಿಣಿ ನೇಣಿಗೆ ಶರಣು

ಮಡಿಕೇರಿ: ಖಾಸಗಿ ಫೈನಾನ್ಸ್ ಸಂಘವೊಂದರ ಸಾಲಭಾದೆಯ ಕಿರುಕುಳಕ್ಕೆ ಮನನೊಂದ ಗೃಹಿಣಿಯೊಬ್ಬರು ನೇಣಿಗೆ ಶರಣಾಗಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಮುಳ್ಳುಸೋಗೆ ಗ್ರಾಮದಲ್ಲಿ ನಡೆದಿದೆ.

ಮುಳ್ಳುಸೋಗೆ ಗ್ರಾಮದ ನಿವಾಸಿ ಸಂತೋಷ್ ಅವರ ಪತ್ನಿ ಮಂಜುಳಾ(25) ಮೃತ ಗೃಹಿಣಿ. ಮಂಜುಳಾ ಸಂಘವೊಂದರ ಸಾಲದ ವಸೂಲಾತಿಯ ಕಿರುಕುಳಕ್ಕೆ ಹೆದರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕುಶಾಲನಗರದ ಖಾಸಗಿ ಫೈನಾನ್ಸ್ ಮೂಲಕ ಸುಮಾರು 25 ಸಾವಿರ ರೂ.ಗಳ ಹಣವನ್ನು ಸಾಲದ ರೂಪದಲ್ಲಿ ಪಡೆದಿಕೊಂಡಿದ್ದರು. ಅದನ್ನು 6 ಕಂತುಗಳಲ್ಲಿ ಪಾವತಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಇತ್ತೀಚೆಗೆ ಕೊಡಗು ಜಿಲ್ಲೆಯು ವಿಪರೀತ ನೆರೆಹಾವಳಿಯಿಂದ ತತ್ತರಿಸಿದ್ದು, ಇಲ್ಲಿನ ಜನರು ಆಸ್ತಿ-ಪಾಸ್ತಿ, ಮನೆ-ಮಠ ಕಳೆದುಕೊಂಡು ಸಂಕಷ್ಟದ ಸ್ಥಿತಿಯಲ್ಲಿ ಇರುವುದನ್ನು ಮನಗಂಡ ಕೊಡಗು ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರು ಸಾಲಗಾರರಾದ ಸಂತ್ರಸ್ತರ ಬಳಿಯಿಂದ ಯಾವುದೇ ರೀತಿಯಲ್ಲಿ ಬಲವಂತದ ವಸೂಲಾತಿಯನ್ನು ರಾಷ್ಟ್ರೀಕೃತ ಬ್ಯಾಂಕ್ ಗಳಾಗಲೀ ಸಹಕಾರ ಸಂಘದ ಬ್ಯಾಂಕ ಗಳಾಗಲಿ ಫೈನಾನ್ಸ್ ಕಂಪನಿಗಳಾಗಲಿ ಮಾಡಬಾರದು ಎಂಬ ಆದೇಶವನ್ನು ನೀಡಿದ್ದಾರೆ.

ಜಿಲ್ಲಾಧಿಕಾರಿಯವರ ಆದೇಶವನ್ನೆಲ್ಲಾ ಗಾಳಿಗೆ ತೂರಿರುವ ಇಲ್ಲಿನ ಖಾಸಗಿ ಫೈನಾನ್ಸ್ ಒಂದರ ಸಂಘದ ಕೆಲ ಏಜೆಂಟರು ಮಂಜುಳಾರವರ ಮನೆಗೆ ಬಂದು ಸಾಲದ ಮರುಪಾವತಿಗೆ ಒತ್ತಾಯಿಸಿದ್ದಾರೆ. ಇದರಿಂದ ಮನನೊಂದ ಮಂಜುಳಾ ನೇಣಿಗೆ ಶರಣಾಗಿರುವುದಾಗಿ ತಿಳಿದುಬಂದಿದೆ.

ಈ ಕುರಿತು ಮೃತಾಳ ಪತಿ ಸಂತೋಷ್ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *