ತನ್ನ ನಾಲಗೆಯನ್ನೇ ಕತ್ತರಿಸಿ ದೇವಿಗೆ ಅರ್ಪಿಸಿದ ಭಕ್ತೆ!

ಭೋಪಾಲ್: 45 ವರ್ಷದ ಮಹಿಳೆಯೊಬ್ಬರು ದೇವಸ್ಥಾನದಲ್ಲಿ ದೇವಿಯ ಮುಂದೆಯೇ ನಾಲಗೆ ಕತ್ತರಿಸಿದ ಅರ್ಪಿಸಿದ ಅಚ್ಚರಿಯ ಘಟನೆಯೊಂದು ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ತರ್ಸಮಾ ಗ್ರಾಮದಲ್ಲಿ ನಡೆದಿದೆ.

ಬಾಯಿಂದ ರಕ್ತ ಸೋರುತ್ತಿರುವಾಗಲೇ ಪ್ರಕರಣ ಬೆಳಕಿಗೆ ಬಂದಿರುವುದಾಗಿ ಮಹಿಳೆಯ ಸಂಬಂಧಿಕರು ತಿಳಿಸಿದ್ದಾರೆ. ಆದ್ರೆ ಮಹಿಳೆ ಯಾವ ಬೇಡಿಕೆಯಿಟ್ಟು ಈ ಕೃತ್ಯ ಎಸಗಿದ್ದಾರೆಂದು ತಿಳಿದುಬಂದಿಲ್ಲ.

ಮಹಿಳೆ ಪ್ರತಿನಿತ್ಯ ಸ್ಥಳೀಯ ಬಿಜಾಸನ ಮಾತಾ ದೇವಸ್ಥಾನಕ್ಕೆ ತೆರಳುತ್ತಿದ್ದರು. ಎಂದಿನಂತೆ ದೇವಸ್ಥಾನಕ್ಕೆ ತೆರಳಿದ್ದ ಮಹಿಳೆ ಏಕಾಏಕಿ ದೇವಿಯ ಮುಂದೆ ತನ್ನ ನಾಲಗೆಯನ್ನು ಕತ್ತರಿಸಿದ್ದಾರೆ. ಕೂಡಲೇ ಪ್ರಜ್ಞಾಹೀನರಾಗಿ ಬಿದ್ದಿದ್ದಾರೆ.

ಘಟನೆ ನಡೆದ ಕೂಡಲೇ ಅಲ್ಲೇ ಇದ್ದ ಪ್ರತ್ಯಕ್ಷದರ್ಶಿಗಳು ಕೂಡಲೇ ಮಹಿಳೆಯನ್ನು ಮೊರೇನಾದ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ ಅಂತ ಪೋರ್ಸಾ ಪೊಲೀಸ್ ಠಾಣೆಯ ಉಸ್ತುವಾರಿ ಅತುಲ್ ಸಿಂಗ್ ತಿಳಿಸಿದ್ದಾರೆ. ವಿಶ್ವಾಸ ಮತ್ತು ಅತಿಯಾದ ನಂಬಿಕೆಯೇ ಮಹಿಳೆ ಈ ಕೃತ್ಯ ಎಸಗಲು ಕಾರಣವೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ಕುರಿತು ಮಹಿಳೆಯ ಪತಿ ರವಿ ತೋಮರ್ ಪ್ರತಿಕ್ರಿಯಿಸಿ, ನಮ್ಮ ಮದುವೆಯಾದಾಗಿನಿಂದ ಪ್ರತಿ ನಿತ್ಯ ಆಕೆ ದಿನದಲ್ಲಿ ಎರಡು ಬಾರಿ ಅಂದರೆ ಬೆಳಗ್ಗೆ ಮತ್ತು ಸಂಜೆ ದೇವಿ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸುತ್ತಿದ್ದಳು. ನಮಗೆ ಮೂವರು ಗಂಡು ಮಕ್ಕಳಿದ್ದಾರೆ. ನನ್ನ ಪತ್ನಿ ದೇವಿಯನ್ನು ತುಂಬಾ ನಂಬುತ್ತಾಳೆ. ನಿನ್ನೆ ಮಧ್ಯಾಹ್ನದ ನಂತರ ದೇವಸ್ಥಾನಕ್ಕೆ ತೆರಳಿದ್ದ ಆಕೆ ಏಕಾಏಕಿ ತನ್ನ ನಾಲಗೆಯನ್ನು ಕತ್ತರಿಸಿಕೊಂಡು ದೇವಿಗೆ ಅರ್ಪಿಸಿದ್ದಾಳೆ ಅಂತ ಹೇಳಿದ್ದಾರೆ.

ಈ ಘಟನೆ ನಡೆದಿರುವುದು ಇದೇ ಮೊದಲೇನಲ್ಲ, ಈ ಮೊದಲು ಅಂದ್ರೆ 2016ರಲ್ಲಿ ಛತ್ತೀಸ್ ಗಢದಲ್ಲಿ 11 ವರ್ಷದ ಬಾಲಕಿಯೊಬ್ಬಳು ತನ್ನ ನಾಲಗೆಯನ್ನು ಕತ್ತರಿಸಿ ಶಿವನಿಗೆ ಅರ್ಪಿಸಿದ್ದಳು.

Comments

Leave a Reply

Your email address will not be published. Required fields are marked *