ಗರ್ಭಿಣಿಯನ್ನ ಹೊತ್ತು ಆಸ್ಪತ್ರೆಗೆ ಸಾಗಿಸ್ತಿದ್ದಾಗ ಅರಣ್ಯದಲ್ಲೇ ಹೆರಿಗೆ: ತಾಯಿ, ಮಗು ಆರೋಗ್ಯ

ಹೈದರಾಬಾದ್: ರಸ್ತೆ ಸಂಪರ್ಕವಿಲ್ಲದ ಗ್ರಾಮದಿಂದ ಕಾಲ್ನಡಿಗೆ ಮೂಲಕ ಆಸ್ಪತ್ರೆಗೆ ಸಾಗಿಸುವ ವೇಳೆ ಗರ್ಭಿಣಿಗೆ ಹೆರಿಗೆಯಾಗಿದ್ದು, ತಾಯಿ-ಮಗು ಆರೋಗ್ಯವಾಗಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಧಿಕಾರಿಗಳ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ನಿಷ್ಕಾಳಜಿಯಿಂದ ಇಂತಹ ಘಟನೆ ಸಂಭವಿಸುತ್ತಿವೆ ಎಂದು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

ವಿಡಿಯೋದಲ್ಲಿ ಏನಿದೆ?
ಆಂಧ್ರ ಪ್ರದೇಶದ ವಿಜಯನಗರಂ ಜಿಲ್ಲೆಯ ಮಾಸಿಕ ವಾಲಾಸ ಚಿಂತಾಲಾ ಸಾಲುರ್ ಗ್ರಾಮದ ಮುತ್ತಮ್ಮ ಎಂಬವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಅವರ ಪತಿ ಹಾಗೂ ಸಂಬಂಧಿಕರು, ಬಿದಿರಿನ ಕಟ್ಟಿಗೆಗೆ ಸೀರೆಯನ್ನು ಕಟ್ಟಿ, ಜೋಳಿಗೆ ಮಾಡಿ ಮುತ್ತಮ್ಮ ಅವರನ್ನು ಕೂರಿಸಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಗರ್ಭಿಣಿಗೆ ಏನು ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಲು ಗ್ರಾಮದ ಕೆಲವು ಪುರುಷರು ಹಾಗೂ ಮಹಿಳೆಯರು ಆಸ್ಪತ್ರೆಗೆ ಹೊರಟಿದ್ದರು. ಇದನ್ನು ಓದಿ: ಅಂಬುಲೆನ್ಸ್ ಸೇವೆಗೆ ಗರ್ಭಿಣಿಯನ್ನ 12 ಕಿ.ಮೀ. ಹೊತ್ತು ನಡೆದ ಗ್ರಾಮಸ್ಥರು: ಮಗು ಸಾವು

ಅರಣ್ಯ ಪ್ರದೇಶದ ಕಲ್ಲು ಮಣ್ಣು ಮಿಶ್ರಿತ ಗುಡ್ಡ ಬೆಟ್ಟದ ದಾರಿಯಲ್ಲಿಯೇ ಅವರು ನಡೆಯಬೇಕಾಗಿತ್ತು. ಬಳಿಕ ಅವರು ಮುಖ್ಯರಸ್ತೆ ಸೇರಿ ವಾಹನದ ಮೂಲಕ ಮುತ್ತಮ್ಮ ಅವರನ್ನು ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದರು. ಆದರೆ ಗ್ರಾಮದಿಂದ 6 ರಿಂದ 7 ಕಿ.ಮೀ. ನಡೆಯುತ್ತಿದ್ದಂತೆ ದಾರಿಯ ಮಧ್ಯದಲ್ಲಿ ಮುತ್ತಮ್ಮಗೆ ಹೆರಿಗೆ ನೋವು ಹೆಚ್ಚಾಗಿದ್ದರಿಂದ ಅವರನ್ನು ಅಲ್ಲಿಯೇ ಕೆಳಗೆ ಇಳಿಸಿ, ಇಬ್ಬರು ಮಹಿಳೆಯರ ಸಹಾಯದಿಂದ ಹೆರಿಗೆ ಮಾಡಿಸಲಾಗಿದೆ.

ಈ ದೃಶ್ಯವನ್ನು ಸ್ಥಳೀಯ ಯುವಕನೊಬ್ಬ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಅನಾರೋಗ್ಯಕ್ಕೆ ತುತ್ತಾದವರನ್ನು ಹಾಗೂ ಗರ್ಭಿಣಿಯರನ್ನು ಹೀಗೆ ಹೊತ್ತುಕೊಂಡು ಮುಖ್ಯರಸ್ತೆ ಸೇರಬೇಕಾಗಿದೆ. ನಮ್ಮ ಸಮಸ್ಯೆಗೆ ಯಾವುದೇ ಅಧಿಕಾರಿ ಹಾಗೂ ಜನಪ್ರತಿನಿಧಿ ಸ್ಪಂಧಿಸುತ್ತಿಲ್ಲ ಎಂದು ವಿಡಿಯೋ ಮಾಡಿದ್ದ ಬುಡಕಟ್ಟು ಯುವಕ ಆರೋಪಿಸಿದ್ದಾನೆ.

2017ರಲ್ಲಿ ಬುಡಕಟ್ಟು ಜನಾಂಗದ 15 ಪ್ರದೇಶಗಳಿಗೆ ರಸ್ತೆ ಸಂಪರ್ಕ ಕಲ್ಪಿಸಲು 5.5 ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. ಆದರೆ ಗುಡ್ಡಗಾಡು ಪ್ರದೇಶದಲ್ಲಿ ರಸ್ತೆ ನಿರ್ಮಾಣಕ್ಕೆ ಯಾವುದೇ ಗುತ್ತಿಗೆದಾರರು ಮುಂದಾಗುತ್ತಿಲ್ಲ ಎಂದು ಬುಡಕಟ್ಟು ಪ್ರದೇಶಗಳ ಅಧಿವೃದ್ಧಿ ಯೋಜನಾ ಅಧಿಕಾರಿ ಲಕ್ಷ್ಮಿಶ್ ತಿಳಿಸಿದ್ದಾರೆ.

ಇಂತಹದ್ದೇ ಘಟನೆಯೊಂದು ಜೂನ್ ತಿಂಗಳಿನಲ್ಲಿ ನಡೆದಿತ್ತು. ಅರಣ್ಯ ಪ್ರದೇಶ ವಾಸಿಯಾಗಿರುವ 8 ತಿಂಗಳ ಗರ್ಭಿಣಿ ಜಿದಮ್ಮ (22) ಹೆರಿಗೆ ನೋವಿನಿಂದ ಬಳಲುತ್ತಿದ್ದರು. ಹೀಗಾಗಿ ಆಕೆಯನ್ನು ಆಸ್ಪತ್ರೆಗೆ ಸೇರಿಸಲು, ಪತಿ ಹಾಗೂ ಗ್ರಾಮಸ್ಥರು ಪಟ್ಟ ಕಷ್ಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *