ರಾಮ್‍ದೇವ್ ಆ್ಯಪ್ ಹಿಂದಿದೆ ಗೂಗಲ್ ಮಾಜಿ ಮಹಿಳಾ ಟೆಕ್ಕಿಯ ಶ್ರಮ!

ನವದೆಹಲಿ: ಬಾಬಾ ರಾಮ್‍ದೇವ್ ತಮ್ಮ ಪತಂಜಲಿ ಕಂಪೆನಿಯ ಮೂಲಕ ಕಿಂಬೋ ಆ್ಯಪ್ ಅನ್ನು ಬಿಡುಗಡೆಗೊಳಿಸಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ವಿಷಯವಾಗಿದೆ. ಈ ಆ್ಯಪ್‍ನ ಅಭಿವೃದ್ಧಿಯಲ್ಲಿ ಮಹಿಳಾ ಟೆಕ್ಕಿಯೊಬ್ಬರು ಮಹತ್ವದ ಪಾತ್ರ ವಹಿಸಿದ್ದಾರೆ.

ಹೌದು. ಅದಿತಿ ಕಮಲ್ ಎಂಬವರ ಶ್ರಮ ಕಿಂಬೋ ಆ್ಯಪ್ ಹಿಂದಿದೆ. 37 ವರ್ಷದ ಅದಿತಿ ಕಮಲ್ ಕಿಂಬೋ ಆ್ಯಪ್‍ನ ಅಭಿವೃದ್ಧಿ ಪಡಿಸಿದ ಪ್ರಮುಖ ಟೆಕ್ಕಿಯಾಗಿದ್ದಾರೆ. ಇವರು ಅಮೆರಿಕದ ಕ್ಯಾಲಿಫೋರ್ನಿಯ ವಿಶ್ವವಿದ್ಯಾನಿಲಯದಿಂದ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಎಂ.ಎಸ್ಸಿ ಪದವಿ ಮುಗಿಸಿ, ಹ್ಯಾಂಗ್‍ಔಟ್, ಯಾಹೂ ಮೇಲ್, ಒರೆಕಲ್ ಕಂಪನಿಯಲ್ಲಿ ಟೀಂ ಲೀಡರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಹಾಗೂ ಗೂಗಲ್‍ನ ಮಾಜಿ ಉದ್ಯೋಗಿಯಾಗಿದ್ದಾರೆ.

ಬಾಬಾ ರಾಮ್‍ದೇವ್ ಭಾರತದಲ್ಲಿ ಸ್ವದೇಶಿ ವಸ್ತುಗಳನ್ನು ಸಿದ್ಧಪಡಿಸಿ ಯಶಸ್ವಿಯಾಗಿದ್ದರು. ಇವರ ಬಳಿ ಅದಿತಿಯವರು ಸ್ವದೇಶಿ ಆ್ಯಪ್ ಕುರಿತು ಚರ್ಚಿಸಿದ್ದಾರೆ. ಇದಕ್ಕೆ ರಾಮ್‍ದೇವ್ ಅವರು ಒಪ್ಪಿಗೆ ನೀಡಿ ಸಹಾಯಹಸ್ತ ನೀಡಿದ್ದಾರೆ. ಇವರು ಚಾಟಿಂಗ್ ಆ್ಯಪ್‍ಗೆ ಹೆಚ್ಚಿನ ತಂತ್ರಜ್ಞಾನವನ್ನು ಬಳಸಿ ಉತ್ತಮ ವೈಶಿಷ್ಟ್ಯಗಳನ್ನು ಒಳಗೊಂಡಂತೆ ಆ್ಯಪ್‍ನಲ್ಲಿನ ಯಾವುದೇ ಮಾಹಿತಿಯನ್ನು ಹ್ಯಾಕ್ ಮಾಡದ ರೀತಿಯಲ್ಲಿ ಅಭಿವೃದ್ಧಿಪಡಿಸಿದ್ದಾರೆ.

ಆಚಾರ್ಯ ಬಾಲಕೃಷ್ಣ ಮತ್ತು ರಾಮ್‍ದೇವ್ ರವರ ಸಲಹೆಯಂತೆ “ಗೋಸ್ಟ್ ಮೆಸೆಂಜರ್” ಅನ್ನು ವಿನ್ಯಾಸಗೊಳಿಸಿದ್ದಾರೆ. ಇದು ಆ್ಯಪ್‍ನ ಸಂದೇಶಗಳನ್ನು ಓದಿದ ನಂತರ ಅವು ಮರೆಯಾಗುವಂತೆ ಮಾಡುತ್ತದೆ. ವಾಟ್ಸಪ್ ನಲ್ಲಿರುವಂತೆ ಎಲ್ಲಾ ವಿಶೇಷತೆ ಒಳಗೊಂಡ ಈ ಕಿಂಬೋ ಆ್ಯಪ್ ಈಗಲೇ ಒಟ್ಟು 2 ಕೋಟಿ ಗ್ರಾಹಕರನ್ನು ತಲುಪುವಲ್ಲಿ ಯಶಸ್ವಿಯಾಗಿದೆ. ಇದಕ್ಕೆ ಯಾವುದೇ ಚಾಟಿಂಗ್ ಆ್ಯಪ್‍ಗಳು ಸವಾಲೆಸೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಕೆಲವು ತಾಂತ್ರಿಕ ಕಾರಣಗಳಿಂದ “ಕಿಂಬೋ” ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್ ನಿಂದ ರಿಮೂ ಆಗಿದೆ. ಈ ಕುರಿತಂತೆ ಪತಂಜಲಿ ತನ್ನ ಟ್ವಿಟ್ಟರ್ ಮೂಲಕ ನಿರೀಕ್ಷೆಗೂ ಮೀರಿ ಬಳಕೆದಾರರು ಡೌನ್‍ಲೋಡ್ ಮಾಡಿಕೊಂಡಿದ್ದರಿಂದ ಸರ್ವರ್‍ಗಳಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ಜೂನ್ 21 ರಂದು ಸರಿಪಡಿಸಿ ಆ್ಯಪ್ ಅನ್ನು ಪುನಃ ಅನಾವರಣಗೊಳಿಸುತ್ತೇವೆ ಎಂದು ತಿಳಿಸಿದೆ.

ಬಾಬಾ ರಾಮ್‍ದೇವ್‍ರವರು ತಮ್ಮ ಪತಂಜಲಿ ಸಂಸ್ಥೆಯ ಮೂಲಕ ಸ್ವದೇಶಿ ನಿರ್ಮಿತ ಕಿಂಬೋ ಆ್ಯಪ್ ಅನ್ನು ಬುಧವಾರ ಪರಿಚಯಿಸಿತ್ತು. ಬಿಡುಗಡೆಯಾದ ಕೆಲವೇ ಸಮಯದಲ್ಲಿ ದಾಖಲೆಯ ಪ್ರಮಾಣದಲ್ಲಿ ಆ್ಯಪ್ ಅನ್ನು ಗ್ರಾಹಕರು ಡೌನ್‍ಲೋಡ್ ಮಾಡಿಕೊಂಡಿದ್ದರು. ಇದರಿಂದ ಕಿಂಬೋ ಆ್ಯಪ್ ಹೆಚ್ಚು ಸುದ್ದಿಯಾಗಿತ್ತು. ಈ ಕಿಂಬೋ ಆ್ಯಪ್ ಭಾರತದಲ್ಲಿ ವಾಟ್ಸಪ್‍ಗೆ ಪ್ರಬಲ ಪ್ರತಿಸ್ಪರ್ಧಿಯಾಗಿದೆ. ಇದು ಚಾಟಿಂಗ್, ನೆಟ್‍ಕಾಲ್, ವಿಡಿಯೋ ಕಾಲ್, ಫೋಟೋ-ವಿಡಿಯೋ ಶೇರಿಂಗ್ ಹಾಗೂ ಇನ್ನೂ ಅನೇಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಪತಂಜಲಿ ಸಂಸ್ಥೆಯು ತಮ್ಮ ಕನಸಿನ ಯೋಜನೆಯಾದ ಈ ಕಿಂಬೋ ಆ್ಯಪ್ ಅನ್ನು ಅಭಿವೃದ್ಧಿ ಪಡಿಸಿ ವಿನ್ಯಾಸಗೊಳಿಸಿದ ಅದಿತಿ ಕಮಲ್‍ರವರಿಗೆ ಅಭಿನಂದನೆಗಳನ್ನು ಸಲ್ಲಿಸಿದೆ.

https://twitter.com/KamalAditi/status/1002252645321531392

https://twitter.com/KamalAditi/status/1002104737343459328

Comments

Leave a Reply

Your email address will not be published. Required fields are marked *