ಬ್ರಿಜ್‌ ಭೂಷಣ್‌ ತೆಗೆದು ಆ ಸ್ಥಾನಕ್ಕೆ ಮಹಿಳೆ ನೇಮಿಸಿ – ಅಮಿತ್‌ ಶಾಗೆ ಕುಸ್ತಿಪಟುಗಳ ಬೇಡಿಕೆ

ನವದೆಹಲಿ: ಭಾರತ ಕುಸ್ತಿ ಫೆಡರೇಷನ್‌ (WFI) ಅಧ್ಯಕ್ಷ ಸ್ಥಾನಕ್ಕೆ ಮಹಿಳೆಯನ್ನು ನೇಮಿಸಿ. ಬ್ರಿಜ್‌ ಭೂಷಣ್‌ ಸಿಂಗ್‌ (Brij Bhushan Sharan Singh) ಕುಟುಂಬದ ಯಾವೊಬ್ಬ ಸದಸ್ಯರನ್ನೂ ಆ ಸ್ಥಾನಕ್ಕೆ ನೇಮಿಸಬೇಡಿ ಎಂದು ಕೇಂಗ್ರ ಗೃಹ ಸಚಿವ ಅಮಿತ್‌ ಶಾ (Amit Shah) ಮುಂದೆ ಪ್ರತಿಭಟನಾನಿರತ ಕುಸ್ತಿಪಟುಗಳು (Wrestlers) ಬೇಡಿಕೆ ಇಟ್ಟಿದ್ದಾರೆ.

ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಜೂನ್ 9 ರೊಳಗೆ ಬಂಧಿಸುವಂತೆ ಒತ್ತಾಯಿಸಿ ಪ್ರತಿಭಟನಾನಿರತ ಕುಸ್ತಿಪಟುಗಳು ಈಚೆಗೆ ಅಮಿತ್ ಶಾ ಅವರನ್ನು ಭೇಟಿಯಾಗಿದ್ದರು. ಅಪ್ರಾಪ್ತರು ಸೇರಿದಂತೆ ಮಹಿಳಾ ಕ್ರೀಡಾಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಬ್ರಿಜ್‌ ಭೂಷಣ್‌ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೇ ಅಮಿತ್‌ ಶಾ ಮುಂದೆ ಕುಸ್ತಿಪಟುಗಳು ಇಟ್ಟ ಬೇಡಿಕೆ ಏನೆಂಬುದು ಈಗ ವೈರಲ್‌ ಆಗಿದೆ. ಇದನ್ನೂ ಓದಿ: ಹೋರಾಟದಿಂದ ಹಿಂದೆ ಸರಿದಿಲ್ಲ, ಸುಳ್ಳು ಸುದ್ದಿ ಹಬ್ಬಿಸಬೇಡಿ – ಸಾಕ್ಷಿ ಮಲಿಕ್

ಬ್ರಿಜ್ ಭೂಷಣ್ ವಿರುದ್ಧ ಎರಡು ಎಫ್‌ಐಆರ್‌ ದಾಖಲಿಸಲಾಗಿದೆ. ಪೋಕ್ಸೋ ಕಾಯ್ದೆಯಡಿ ಪ್ರಕರಣವೊಂದನ್ನು ದಾಖಲಿಸಲಾಗಿದೆ.

ಗೃಹ ಮಂತ್ರಿ ಅಮಿತ್‌ ಶಾ ಅವರ ಭೇಟಿ ಫಲಪ್ರದವಾಗಿಲ್ಲ. ಸಚಿವರಿಂದ ಯಾವುದೇ ಭರವಸೆ ಸಿಕ್ಕಿಲ್ಲ ಎಂದು ಕುಸ್ತಿಪಟು ಸಾಕ್ಷಿ ಮಲಿಕ್‌ ಪತಿ ಸತ್ಯವ್ರತ್‌ ಕಡಿಯನ್‌ ತಿಳಿಸಿದ್ದರು. ನ್ಯಾಯ ಸಿಗುವವರೆಗೂ ಹೋರಾಟದಿಂದ ಹಿಂದೆ ಸರಿಯಲ್ಲ ಎಂದು ಸಾಕ್ಷಿ ಮಲಿಕ್‌ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಕಾನೂನು ಎಲ್ಲರಿಗೂ ಒಂದೇ, ತನ್ನದೇ ಆದ ಕ್ರಮ ತೆಗೆದುಕೊಳ್ಳಲಿ- ಕುಸ್ತಿಪಟುಗಳಿಗೆ ಅಮಿತ್ ಶಾ ಭರವಸೆ

ಈಗ ಮತ್ತೆ ಕುಸ್ತಿಪಟುಗಳನ್ನು ಕೇಂದ್ರ ಕ್ರೀಡಾ ಸಚಿವರು ಮಾತುಕತೆಗೆ ಕರೆದಿದ್ದಾರೆ. ಸಚಿವರ ಮನೆಗೆ ಪ್ರತಿಭಟನಾನಿರತರು ತೆರಳಿದ್ದಾರೆ.

ಲೈಂಗಿಕ ಕಿರುಕುಳ ಆರೋಪ ಹೊತ್ತಿರುವ ಬಿಜೆಪಿ ಸಂಸದ ಬ್ರಿಜ್‌ ಭೂಷಣ್‌ ವಿರುದ್ಧ ಕುಸ್ತಿಪಟುಗಳು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಡಬ್ಲ್ಯೂಎಫ್‌ಐ ಅಧ್ಯಕ್ಷ ಸ್ಥಾನದಿಂದ ಬ್ರಿಜ್‌ ಭೂಷಣ್‌ ತೆಗೆದುಹಾಕಿ, ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ. ಆದರೆ ಕುಸ್ತಿಪಟುಗಳ ಆರೋಪವನ್ನು ಬ್ರಿಜ್‌ ಭೂಷಣ್‌ ತಳ್ಳಿಹಾಕಿದ್ದಾರೆ.