16 ಲಕ್ಷ ಸುಪಾರಿ ಕೊಟ್ಟು ಪತ್ನಿಯಿಂದ ಪತಿ ಕೊಲೆ.!

ಚಂಡೀಗಢ: ಮಹಿಳೆಯೊಬ್ಬಳು ಸುಪಾರಿ ಕೊಟ್ಟು ಪತಿಯನ್ನೇ ಕೊಲೆ ಮಾಡಿಸಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ.

ಜೋಗೇಂದ್ರ ಸಿಂಗ್ (37) ಮೃತ ವ್ಯಕ್ತಿ. ಪೊಲೀಸರು ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪತ್ನಿ ಸ್ವೀಟಿ ಸೇರಿದಂತೆ ಏಳು ಮಂದಿಯನ್ನು ಬಂಧಿಸಿದ್ದಾರೆ.

ಭಾನುವಾರ ಸಿಂಗ್ ಮೃತದೇಹ ಗುರುಗ್ರಾಮದ ಬಾಜ್ಗೆರಾದ ಒಂದು ಕಣಿವೆಯಲ್ಲಿ ಪತ್ತೆಯಾಗಿದೆ. ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮೃತ ಸಿಂಗ್ ನನ್ನು ಹಗ್ಗದಿಂದ ಕಟ್ಟಲಾಗಿದ್ದು, ಗೋಣಿ ಚೀಲದಲ್ಲಿ ತುಂಬಿರುವುದು ಹಾಗೂ ಮೃತ ಸಿಂಗ್ ದೇಹದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿದೆ. ನಂತರ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷಗೆಂದು ಆಸ್ಪತ್ರೆಗೆ ರವಾನಿಸಿ ತನಿಖೆಯನ್ನು ಮುಂದುವರಿಸಿದ್ದಾರೆ.

ಮೊದಲಿಗೆ ಅನುಮಾನ ಮೇರೆಗೆ ಮೃತ ಪತ್ನಿ ಸ್ವೀಟಿ ಮತ್ತು ಸಹೋದರನನ್ನು ವಿಚಾರಣೆ ನಡೆಸಿದ್ದೆವು. ಆಗ ತಾವೇ ಸುಪಾರಿ ಕೊಟ್ಟು ಕೊಲೆ ಮಾಡಿಸಿರುವುದಾಗಿ ಒಪ್ಪಿಕೊಂಡಿದ್ದಾರೆ. ಇದಕ್ಕೂ ಮುನ್ನಾ ಇವರೇ ಪತಿ ನಾಪತ್ತೆಯಾಗಿದ್ದಾರೆ ಎಂದು ದೂರು ದಾಖಲಿಸಿದ್ದರು ಎಂದು ಗುರುಗ್ರಾಮ ಪೊಲೀಸ್ ವಕ್ತಾರ ಸುಭಾಷ್ ತಿಳಿಸಿದ್ದಾರೆ.

ಕೊಲೆ ಮಾಡಿದ್ದು ಯಾಕೆ?
ಮೃತ ಸಿಂಗ್ ಬೇರೆ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿರುವುದನ್ನು ಪತ್ನಿ ಸ್ವೀಟಿ ಗಮನಿಸಿದ್ದಾಳೆ. ಪತಿ ಆಕೆಯನ್ನೇ ಮದುವೆಯಾಗಿ ತನ್ನ ಆಸ್ತಿಯನ್ನು ಅವಳ ಹೆಸರಿಗೆ ಬರೆಯುತ್ತಾನೆ ಎನ್ನುವ ಕಾರಣಕ್ಕೆ ಕೊಲೆ ಮಾಡಿಸಿದ್ದಾಳೆ. ಆರೋಪಿ ಸ್ವೀಟಿ ಪತಿ ಕೊಲೆ ಮಾಡಲು ಕೊಲೆಗಾರಿಗೆ ಬರೋಬ್ಬರಿ 16 ಲಕ್ಷ ರೂ. ಸುಪಾರಿ ಕೊಟ್ಟಿದ್ದಾಳೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮೃತ ಸಿಂಗ್ ನನ್ನು ಜನವರಿ 16ರಂದೇ ಮನೆಯಲ್ಲಿಯೇ ಕೊಲೆ ಮಾಡಿದ್ದಾರೆ. ಬಳಿಕ ಆತ ಮೃತದೇಹವನ್ನು ಗೋಣಿ ಚೀಲದಲ್ಲಿ ತುಂಬಿ ಕಂದಕಕ್ಕೆ ಎಸೆದಿದ್ದಾರೆ. ನಂತರ ತಮ್ಮ ಮೇಲೆ ಅನುಮಾನ ಬರಬಾರದೆಂದು ಜನವರಿ 17 ರಂದು ತನ್ನ ಪತಿ ಕಾಣೆಯಾಗಿರುವುದಾಗಿ ಆರೋಪಿ ಪತ್ನಿಯೇ ದೂರು ನೀಡಿದ್ದು, ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.

ಕೊಲೆಗಾರರು ಉತ್ತರಪ್ರದೇಶ ಮತ್ತು ದೆಹಲಿಯ ವಿವಿಧ ಭಾಗಗಳಿಂದ ಬಂದಿದ್ದರು. ಸದ್ಯಕ್ಕೆ ಎಲ್ಲರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *