ಸೆಕ್ಸ್, ಮದುವೆಗೆ ನಿರಾಕರಿಸಿದ್ದಕ್ಕೆ ಪ್ರಿಯಕರನ ಮರ್ಮಾಂಗವನ್ನೇ ಕತ್ತರಿಸಿದ ಮಹಿಳೆಯ ಬಂಧನ

ನವದೆಹಲಿ: ಮದುವೆಯಾಗಲು ನಿರಾಕರಿಸಿದ್ದಕ್ಕೆ ತನ್ನ ಪ್ರಿಯಕರನ ಮರ್ಮಾಂಗವನ್ನು ಕತ್ತರಿಸಿದ 23 ವರ್ಷದ ಮಹಿಳೆಯನ್ನು ಪೊಲೀಸರು ಭಾನುವಾರದಂದು ಬಂಧಿಸಿದ್ದಾರೆ.

ದೆಹಲಿಯ ಮಂಗೋಲ್ಪುರಿಯ ಮಹಿಳೆಯ ಮನೆಯಲ್ಲಿ 35 ವರ್ಷದ ಬೀದಿ ವ್ಯಾಪಾರಿ ರವಿ ಮೇಲೆ ಬುಧವಾರದಂದು ದಾಳಿ ನಡೆದಿದೆ. ಮಹಿಳೆಯ ಸಂಬಂಧಿಯೊಬ್ಬರು ರವಿಯನ್ನ ಅಲ್ಲಿಗೆ ಕರೆಸಿಕೊಂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ರವಿ ತನ್ನ 4 ವರ್ಷದ ಪ್ರೇಯಸಿಯ ಮನೆಗೆ ಹೋದ ನಂತರ ಮದುವೆಯ ಬಗ್ಗೆ ಪ್ರಸ್ತಾಪವಾಗಿದೆ. ಆದ್ರೆ ಮದುವೆಗೆ ತನ್ನ ಮನೆಯವರ ವಿರೋಧವಿದೆ ಎಂದು ರವಿ ಮದುವೆಯಾಗಲು ನಿರಾಕರಿಸಿದ್ದಾರೆ. ನಂತರ ಮಹಿಳೆಯು ರವಿಯನ್ನು ಬಲವಂತವಾಗಿ ಬಾತ್‍ರೂಮಿಗೆ ಕರೆದೊಯ್ದು, ಆತನ ಬಟ್ಟೆ ಕಳಚಿ ಆಕೆಯೊಂದಿಗೆ ಸೆಕ್ಸ್ ಮಾಡುವಂತೆ ಒತ್ತಾಯ ಮಾಡಿದಳು ಎಂದು ರವಿ ಪೊಲೀಸರಿಗೆ ಹೇಳಿದ್ದಾರೆ.

ತಾನು ಹೇಳಿದಂತೆ ಮಾಡದಿದ್ದರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಮಹಿಳೆ ಬೆದರಿಕೆ ಹಾಕಿದ್ದು, ರವಿ ಇದಕ್ಕೆ ನಿರಾಕರಿಸಿದಾಗ ಚಾಕುವಿನಿಂದ ಮರ್ಮಾಂಗವನ್ನು ಕತ್ತರಿಸಿದ್ದಾಳೆ. ಈ ಘಟನೆ ನಡೆದಾಗ ಮಹಿಳೆಯ ಸಹೋದರ ಹಾಗೂ ಅತ್ತಿಗೆ ಮನೆಯಲ್ಲೇ ಇದ್ದರು. ಆಕೆ ನನ್ನ ಮೇಲೆ ದಾಳಿ ಮಾಡಿದಾಗ ಅವರು ತಡೆಯಲು ಮುಂದಾಗಲಿಲ್ಲ ಎಂದು ರವಿ ಹೇಳಿದ್ದಾರೆ.

ದಾಳಿಯ ಬಳಿಕ ರವಿ ಕಿರುಚುತ್ತಾ ಮನೆಯಿಂದ ಹೊರಗೆ ಓಡಿಬಂದಿದ್ದು, ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ವಿಷಯ ಮುಟ್ಟಿಸಿ, ರವಿಯನ್ನು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಶಸ್ತ್ರಚಿಕಿತ್ಸೆಯ ಬಳಿಕ ರವಿಯನ್ನು ಜೈಪುರ ಗೋಲ್ಡನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೃತ್ಯವೆಸಗಿದ ನಂತರ ಮಹಿಳೆ ಹಾಗೂ ಆಕೆಯ ಮನೆಯವರು ಪರಾರಿಯಾಗಿದ್ದರು. ಭಾನುವಾರದಂದು ಸಹೋದರ ಹಾಗೂ ಅತ್ತಿಗೆಯನ್ನು ಪತ್ತೆಹಚ್ಚಿದ ಪೊಲೀಸರು ಅವರನ್ನು ವಿಚಾರಣೆಗೊಳಪಡಿಸಿದ್ದು, ನಂತರ ಮಹಿಳೆಯನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ಚಾಕುವನ್ನು ವಶಪಡಿಸಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *