ಮೈದುನನ ಜೊತೆ ಲವ್ವಿಡವ್ವಿ – ಪತಿ ಕೊಂದು ಆಕಸ್ಮಿಕ ಸಾವು ಅಂತ ಬಿಂಬಿಸಿದ್ದ ಮಹಿಳೆ ಬಂಧನ

ನವದೆಹಲಿ: ಆಕಸ್ಮಿಕ ವಿದ್ಯುತ್‌ ಆಘಾತದಿಂದ ದೆಹಲಿಯ ದೋಹ್ರದ ವ್ಯಕ್ತಿ ಸಾವು ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಮೈದುನನ ಜೊತೆ ಸೇರಿಕೊಂಡು ತನ್ನ ಗಂಡನನ್ನೇ ಮಹಿಳೆ ಕೊಲೆ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ.

ಜು.13 ರಂದು ಕರಣ್ ದೇವ್ (36) ಅವರನ್ನು ಮಾತಾ ರೂಪಾನಿ ಮ್ಯಾಗೊ ಆಸ್ಪತ್ರೆಗೆ ಪತ್ನಿ ಸುಶ್ಮಿತಾ ದಾಖಲಿಸಿದ್ದರು. ಆಕಸ್ಮಿಕವಾಗಿ ವಿದ್ಯುತ್ ಆಘಾತಕ್ಕೊಳಗಾಗಿದ್ದಾರೆ ಎಂದು ಹೇಳಿಕೊಂಡಿದ್ದರು. ವೈದ್ಯಕೀಯ ಪರೀಕ್ಷೆ ನಡೆಸಿದಾಗ, ವ್ಯಕ್ತಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು. ಮೃತ ವ್ಯಕ್ತಿಯ ವಯಸ್ಸು ಮತ್ತು ಸಾವಿನ ಸಂದರ್ಭವನ್ನು ಉಲ್ಲೇಖಿಸಿ ದೆಹಲಿ ಪೊಲೀಸರು ಮರಣೋತ್ತರ ಪರೀಕ್ಷೆಗೆ ಒತ್ತಾಯಿಸಿದರು. ಇದಕ್ಕೆ ಮೃತ ವ್ಯಕ್ತಿಯ ಪತ್ನಿ ಮತ್ತು ಆತನ ಸೋದರಸಂಬಂಧಿ ರಾಹುಲ್ ಆಕ್ಷೇಪ ವ್ಯಕ್ತಪಡಿಸಿದರು.

ಕೊನೆಗೆ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ರವಾನಿಸಿದರು. ಘಟನೆ ನಡೆದ ಮೂರು ದಿನಗಳ ನಂತರ, ಮೃತ ವ್ಯಕ್ತಿಯ ಕಿರಿಯ ಸಹೋದರ ಕುನಾಲ್ ಪೊಲೀಸ್‌ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಕರಣ್‌ನನ್ನು ಆತನ ಪತ್ನಿ ಮತ್ತು ಮೃತನ ಸೋದರಸಂಬಂಧಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ. ಸುಶ್ಮಿತಾ ಮತ್ತು ರಾಹುಲ್ ನಡುವಿನ ಇನ್‌ಸ್ಟಾಗ್ರಾಮ್ ಚಾಟ್‌ನ ಪುರಾವೆಗಳನ್ನು ಸಹ ಒದಗಿಸಿದ್ದಾನೆ. ಚಾಟ್‌ನಲ್ಲಿ ಇಬ್ಬರೂ ಕೊಲೆ ಮಾಡುವ ಬಗ್ಗೆ ಸಂಚು ರೂಪಿಸಿರುವುದು ಬಹಿರಂಗವಾಗಿದೆ.

ಮೃತನ ಪತ್ನಿ ಮತ್ತು ಆಕೆಯ ಮೈದುನನ ನಡುವೆ ಅನೈತಿಕ ಸಂಬಂಧವಿತ್ತು. ಇದರಿಂದಾಗಿ ಇಬ್ಬರೂ ಸೇರಿಕೊಂಡು ಕರಣ್‌ನನ್ನು ಕೊಲ್ಲಲು ನಿರ್ಧರಿಸಿದ್ದರು. ಊಟದ ಸಮಯದಲ್ಲಿ 15 ನಿದ್ರೆ ಮಾತ್ರೆಗಳನ್ನು ನೀಡಿ ಪ್ರಜ್ಞೆ ತಪ್ಪಿಸಿ, ಆಕಸ್ಮಿಕ ಸಾವು ಎಂದು ಬಿಂಬಿಸಲು ಕರಣ್‌ಗೆ ವಿದ್ಯುತ್ ಶಾಕ್ ನೀಡಿದ್ದಾರೆ.

ಆರೋಪಿ ಪತ್ನಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಚಾರಣೆಯ ಸಮಯದಲ್ಲಿ ಆಕೆ ತನ್ನ ಪ್ರಿಯಕರ ಮೈದುನನ ಜೊತೆ ಸೇರಿಕೊಂಡು ಪತಿಯನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾಳೆ. ಪ್ರಾಥಮಿಕ ತನಿಖೆಯ ಆಧಾರದ ಮೇಲೆ, ಸೂಕ್ತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಂಧನ ಪ್ರಕ್ರಿಯೆ ನಡೆಯುತ್ತಿದೆ ಎಂದು ಡಿಸಿಪಿ ದ್ವಾರಕಾ ಅಂಕಿತ್ ಸಿಂಗ್ ಹೇಳಿದ್ದಾರೆ.