ದಾಯಾದಿಗಳ ಮತ್ಸರಕ್ಕೆ ನಲುಗಿದ ಮಕ್ಕಳು- ಶೌಚಾಲಯ, ವಿದ್ಯುತ್ ಸಂಪರ್ಕವಿಲ್ಲದೆ ಪರದಾಟ

– ಮಾಜಿ ಡಿಸಿಎಂ ಕ್ಷೇತ್ರದಲ್ಲೇ ದೌರ್ಜನ್ಯ

ತುಮಕೂರು: ದಾಯಾದಿಗಳ ಮತ್ಸರಕ್ಕೆ ಇಡೀ ಗ್ರಾಮ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದರೂ ಒಂದು ಮನೆಗೆ ಮಾತ್ರ ವಿದ್ಯುತ್ ಸಂಪರ್ಕ, ಶೌಚಾಲಯವಿಲ್ಲದೆ ಸಮಸ್ಯೆ ಎದುರಿಸುತ್ತಿರುವ ಘಟನೆ ಜಿಲ್ಲೆ ಕೊರಟಗೆರೆ ಕ್ಷೇತ್ರದ ಚಿಕ್ಕತೊಟ್ಟುಕೆರೆ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಗ್ರಾಮದ ರಾಮಸ್ವಾಮಿ ಎಂಬವರ ಮನೆಗೆ ಕಳೆದ 18 ವರ್ಷಗಳಿಂದ ವಿದ್ಯುತ್ ಸಂಪರ್ಕವೇ ಇಲ್ಲ. ಊರಿಗೆಲ್ಲಾ ವಿದ್ಯುತ್ ಸೌಕರ್ಯ ಇದ್ದರೂ ರಾಮಸ್ವಾಮಿ ಮನೆಗೆ ಮಾತ್ರ ಅಧಿಕಾರಿಗಳು ವಿದ್ಯುತ್ ಹಾಗೂ ಶೌಚಾಲಯದ ಸೌಕರ್ಯ ಒದಗಿಸುತ್ತಿಲ್ಲ. ಪರಿಣಾಮ ರಾಮಸ್ವಾಮಿಯ ಮಕ್ಕಳು ಮನೆ ಮುಂದಿರುವ ಬೀದಿ ದೀಪದಲ್ಲೇ ಓದಬೇಕಾದ ಪರಿಸ್ಥಿತಿ ಎದುರಾಗಿದೆ. ಅಲ್ಲದೇ ಚಿಮಣಿ ದೀಪದ ಬೆಳಕಲ್ಲಿ ಓದೋಣ ಎಂದರು ಸೀಮೆ ಎಣ್ಣೆನೂ ರೇಷನಲ್ಲಿ ಕೊಡುತ್ತಿಲ್ಲ.

ಮಾಜಿ ಡಿಸಿಎಂ ಜಿ.ಪರಮೇಶ್ವರ್ ಅವರ ಕ್ಷೇತ್ರದಲ್ಲೇ ಇಂತಹ ದೌರ್ಜನ್ಯ ನಡೆಯುತ್ತಿದ್ದು, ರಾಮಸ್ವಾಮಿ ಹಾಗೂ ಅವರ ದಾಯಾದಿಯೊಬ್ಬರ ನಡುವೆ ಜಮೀನು ವಿವಾದ ಇದಕ್ಕೆಲ್ಲ ಕಾರಣವಾಗಿದೆ. ಕೋರ್ಟಿನಲ್ಲಿ ರಾಮಸ್ವಾಮಿ ಪರ ತೀರ್ಪು ಬಂದರೂ ಮನೆ ಕಟ್ಟಿಕೊಂಡು ಮೂಲ ಸೌಲಭ್ಯ ಒದಗಿಸಿಕೊಳ್ಳಲು ದಾಯಾದಿಗಳು ಅಡ್ಡಿಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಪ್ರಭಾವಿಗಳಾಗಿದ್ದ ದಾಯಾದಿಗಳು ಅಧಿಕಾರಿಗಳ ಜೊತೆ ಪಿತೂರಿ ನಡೆಸಿ ದೌರ್ಜನ್ಯ ನಡೆಸುತ್ತಿದ್ದಾರೆ. ಒಮ್ಮೆ ವಿದ್ಯುತ್ ಸಂಪರ್ಕ ಕೊಟ್ಟಿದ್ದು ಕೆಲವೇ ದಿನದಲ್ಲಿ ಕಡಿತಗೊಳಿಸಿದ್ದಾರೆ. ಗ್ರಾಮ ಪಂಚಾಯತಿಯಲ್ಲಿ ವಾಟರ್ ಮ್ಯಾನ್ ಕೆಲಸ ಮಾಡುತಿದ್ದರೂ ನನ್ನ ಮನೆಗೊಂದು ಶೌಚಾಲಯ ಕಟ್ಟಿಸಿಕೊಳ್ಳಲು ಆಗಿಲ್ಲ. ಪರಿಣಾಮ ವಯಸ್ಸಿಗೆ ಬಂದ ನನ್ನ ಹೆಣ್ಣುಮಕ್ಕಳು ರಾತ್ರಿ ವೇಳೆ ಬಯಲಿಗೆ ಹೋಗಬೇಕಾಗಿದೆ ಎಂದು ರಾಮಸ್ವಾಮಿ ಅವರು ಸಂಕಟ ತೋಡಿಕೊಂಡಿದ್ದಾರೆ.

ಕನಿಷ್ಟ ಪಕ್ಷ ಶೌಚಾಲಯ, ವಿದ್ಯುತ್ ಸಂಪರ್ಕವನ್ನಾದರೂ ಕೊಡಿ ಎಂದು ಅಧಿಕಾರಗಳ ಬಳಿ ರಾಮಸ್ವಾಮಿ ಮಕ್ಕಳು ಅಂಗಲಾಚಿ ಬೇಡಿಕೊಂಡಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ಯಾವುದೇ ಪ್ರತಿಕ್ರಿಯೆ ನೀಡದೆ ಜಾಣ ಮೌನವಹಿಸಿದ್ದಾರೆ.

Comments

Leave a Reply

Your email address will not be published. Required fields are marked *