ಮುಂಬೈ: ಟೀಂ ಇಂಡಿಯಾ ಮಹಿಳಾ ತಂಡದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಸಂಗತಿ ಮತ್ತೊಮ್ಮೆ ಮಿಥಾಲಿ ರಾಜ್ ಹಾಗೂ ಪವರ್ ನಡುವಿನ ವಿವಾದಲ್ಲಿ ಮತ್ತೆ ಬಹಿರಂಗವಾಗಿತ್ತು. ಈ ನಡುವೆ ಬಿಸಿಸಿಐ ಪವರ್ ಅವರ ಅವಧಿ ಅಂತ್ಯವಾಗುತ್ತಿದಂತೆ ಹೊಸ ಕೋಚ್ ಗಾಗಿ ಅರ್ಜಿ ಸಲ್ಲಿಸಲು ಅಹ್ವಾನ ನೀಡಿದೆ.
ಭಾರತದಲ್ಲಿ ಪುರುಷರ ಕ್ರಿಕೆಟಿಗೆ ಹೆಚ್ಚಿನ ಬೆಂಬಲ ಲಭಿಸುತ್ತದೆ. ಮಹಿಳಾ ಕ್ರಿಕೆಟ್‍ಗೆ ಬೆಂಬಲ ಕಡಿಮೆ ಎಂಬ ಅಭಿಪ್ರಾಯವಿತ್ತು. ಆದರೆ ಇತ್ತೀಚೆಗೆ ಮಹಿಳಾ ಕ್ರಿಕೆಟ್ ತಂಡದ ಪ್ರದರ್ಶನ ಎಲ್ಲರ ಗಮನ ಸೆಳೆದಿತ್ತು. ಆದರೆ ಆಟಗಾರ್ತಿಯರು ಕೋಚ್ ನಡುವಿನ ಗುದ್ದಾಟ ಮಾತ್ರ ತಂಡದ ಮೇಲೆ ಹೆಚ್ಚಿನ ಪ್ರಭಾವ ಬೀರಿದೆ ಎಂದು ಹೇಳಬಹುದು. ವಿಶ್ವಕಪ್ ಲೀಗ್ ಹಂತದಲ್ಲಿ ಸೋಲಿಲ್ಲದ ತಂಡವಾಗಿ ಸೆಮಿಫೈನಲ್ ಪ್ರವೇಶ ಮಾಡಿದ್ದ ತಂಡ ಇಂಗ್ಲೆಂಡ್ ವಿರುದ್ಧ ಹೀನಾಯವಾಗಿ ಸೋತು ಟೂರ್ನಿಯಿಂದ ಹೊರಬಿದ್ದಿತ್ತು. ಇದಕ್ಕೆ ಆಡುವ 11 ಬಳಗದಿಂದ ಮಿಥಾಲಿ ರಾಜ್ ರನ್ನು ಕೈಬಿಟ್ಟಿದೆ ಕಾರಣ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು.

ಇದರ ಬೆನ್ನಲ್ಲೇ ಬಿಸಿಸಿಐಗೆ ಪತ್ರ ಬರೆದಿದ್ದ ಮಿಥಾಲಿರಾಜ್ ಕೋಚ್ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ಈ ಆರೋಪಗಳಿಗೆ ರಮೇಶ್ ಪವರ್ ಕೂಡ ಪ್ರತಿಕ್ರಿಯೆ ನೀಡಿ ತಿರುಗೇಟು ನೀಡಿದ್ದರು. ಅಲ್ಲದೇ ಮಿಥಾಲಿ ರಾಜ್ ಇದು ನನ್ನ ಜೀವನದ ಕರಾಳ ದಿನ ಎಂದು ಬೇಸರ ವ್ಯಕ್ತಪಡಿಸಿದ್ದರು. ಈ ಹಿಂದೆ ತಂಡದ ಕೋಚ್ ಆಗಿದ್ದ ತುಷಾರ ಆರೋತೆ ಕೂಡ ಇಂತಹದ್ದೇ ವಿವಾದಕ್ಕೆ ಒಳಗಾಗಿ ರಾಜೀನಾಮೆ ನೀಡಿದ್ದರು.
ಈ ಘಟನೆಗಳ ಬಳಿಕ ಬಿಸಿಸಿಐ ಮಹಿಳಾ ಕ್ರಿಕೆಟ್ ತಂಡದ ಕೋಚ್ ಆಯ್ಕೆ ವಿಚಾರದಲ್ಲಿ ಜಾಗೃತಿ ವಹಿಸಬೇಕಿದೆ. ಪವರ್ ಅವರ ಮೂರು ತಿಂಗಳ ಕೋಚ್ ಅವಧಿ ಅಂತ್ಯವಾಗಿದ್ದು, ಬಿಸಿಸಿಐ ಆಹ್ವಾನ ನೀಡಿರುವ ಹುದ್ದೆಗೆ ಟೀಂ ಇಂಡಿಯಾ ಮಾಜಿ ವೇಗಿ ವೆಂಕಟೇಶ್ ಪ್ರಸಾದ್, ಟಾಮ್ ಮೂಡಿ, ಡೇವ್ ವಾಟ್ಮೋರ್ ಅರ್ಜಿ ಸಲ್ಲಿಸಲು ಆಸಕ್ತಿ ವಹಿಸಿದ್ದಾರೆ ಎನ್ನಲಾಗಿದೆ.

ಇದೇ ವೇಳೆ ಟೀಂ ಇಂಡಿಯಾ ಮಹಿಳಾ ತಂಡಕ್ಕೆ ವಿದೇಶಿ ಕೋಚ್ ನೇಮಕ ಮಾಡುವ ಬಗ್ಗೆ ಹಲವು ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸದ್ಯ ಆಸ್ಟ್ರೇಲಿಯಾದ ಮೂಡಿ ಅವರು ಈ ಪಟ್ಟಿಯಲ್ಲಿ ಇದ್ದು, ಹಲವು ತಂಡಗಳಿಗೆ ಕೋಚಿಂಗ್ ನೀಡಿದ ಅನುಭವ ಹೊಂದಿದ್ದಾರೆ. ಉಳಿದಂತೆ ವಾಟ್ಮೋರ್ ಕೂಡ ಟೀಂ ಇಂಡಿಯಾ ಬೌಲಿಂಗ್ ಕೋಚ್ ಆಗಿ ಅನುಭವ ಹೊಂದಿದ್ದಾರೆ. ಟೀಂ ಇಂಡಿಯಾ ಮಹಿಳಾ ತಂಡ ಜನವರಿಯಲ್ಲಿ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಈ ಮುನ್ನವೇ ತಂಡದ ಕೋಚ್ ಆಯ್ಕೆ ಪ್ರಕ್ರಿಯೆ ಅಂತಿಮಗೊಳ್ಳಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply