ನಿಜಾಮಾಬಾದ್ ಕ್ಷೇತ್ರದಲ್ಲಿ ಇವಿಎಂ ಬದಲಿಗೆ ಬ್ಯಾಲೆಟ್ ಮೊರೆ ಹೋದ ಆಯೋಗ

ಹೈದರಾಬಾದ್: ಇಡೀ ದೇಶವೇ ಇವಿಎಂ ಎಲೆಕ್ಷನ್‍ಗೆ ಸಜ್ಜಾಗುತ್ತಿದ್ದರೆ, ತೆಲಂಗಾಣದ ನಿಜಾಮಾಬಾದ್‍ನಲ್ಲಿ ಮಾತ್ರ ಇವಿಎಂ ಬದಲಿಗೆ ಬ್ಯಾಲೆಟ್ ಪೇಪರ್ ನಲ್ಲಿ ಸ್ಪರ್ಧೆ ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ.

ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ.ಕವಿತಾ ಸ್ಪರ್ಧಿಸುತ್ತಿರುವ ನಿಜಾಮಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ 185 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಇದರಲ್ಲಿ 170 ಮಂದಿ ರೈತರೇ ಇದ್ದಾರೆ. ಹೀಗಾಗಿ, ಇವಿಎಂನಲ್ಲಿ ಚುನಾವಣೆ ನಡೆಸುವುದು ಅಸಾಧ್ಯ ಎಂದು ಆಯೋಗ ಹೇಳಿದೆ.

ತೆಲಂಗಾಣ ರಾಜ್ಯದಲ್ಲಿ ಒಟ್ಟು 545 ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದು, ನಿಜಾಮಾಬಾದ್‍ನಲ್ಲಿ ಮಾತ್ರ 185 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಪರಿಣಾಮ ಇವಿಎಂ ಯಂತ್ರದಲ್ಲಿ ನೋಟಾ ಸೇರಿದಂತೆ 64 ಅಭ್ಯರ್ಥಿಗಳಿಗೆ ಮಾತ್ರ ಸ್ಥಾನ ಕಲ್ಪಿಸಲು ಅವಕಾಶ ಇದೆ. ಪರಿಣಾಮ ಚುನಾವಣಾ ಆಯೋಗ ಬ್ಯಾಲೆಟ್ ಪೇಪರಿನಲ್ಲೇ ಸ್ಪರ್ಧೆ ನಡೆಸಲು ಸಿದ್ಧತೆ ನಡೆಸಿದೆ.

ಕಾರಣವೇನು:
ಜೋಳ ಹಾಗೂ ಅರಿಶಿನ ಬೆಲೆಗೆ ಕನಿಷ್ಠ ಬೆಂಬಲ ಬೆಲೆ, ಅರಿಶಿನ ಮಂಡಳಿ ರಚಿಸುವುದರಲ್ಲಿ ತೆಲಂಗಾಣ ಪಾರ್ಟಿ (ಟಿಆರ್‍ಎಸ್) ವಿಫಲವಾಗಿದೆ ಎಂದು ಪ್ರತಿಭಟನಾರ್ಥ 170 ರೈತರು ನಾಮಪತ್ರ ಸಲ್ಲಿಸಿದ್ದಾರೆ.

ಇದೇ ಮೊದಲಲ್ಲ: ಸಮೂಹಿಕವಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಅಂದರೆ 1996 ರಲ್ಲಿ ಆಂಧ್ರಪ್ರದೇಶದ ನಾಲ್ಗೊಂಡ ಕ್ಷೇತ್ರದಲ್ಲಿ 480 ಮಂದಿ ಸ್ಪರ್ಧೆ ನಡೆಸಿದ್ದರು. ಆ ವೇಳೆ ಬ್ಯಾಲೆಟ್ ಪೇಪರನ್ನೇ ಒಂದು ಬುಕ್ ಲೆಟ್ ಮಾದರಿಯಲ್ಲಿ ಚುನಾವಣಾ ಆಯೋಗ ಮುದ್ರಣ ಮಾಡಿತ್ತು.

ಸದ್ಯ ಉಂಟಾಗಿರುವ ಬಿಕ್ಕಟ್ಟಿನ ಪರಿಸ್ಥಿತಿಯಿಂದ ಕ್ಷೇತ್ರದ ಚುನಾವಣಾ ದಿನಾಂಕವನ್ನು ಬದಲಾವಣೆ ಮಾಡುವ ಸಾಧ್ಯತೆ ಇದೆ. ನಿಗದಿಯಂತೆ ಆಯೋಗ ತೆಲಂಗಾಣ ರಾಜ್ಯದಲ್ಲಿ ಒಂದೇ ಹಂತದಲ್ಲಿ ಮಾತದಾನ ನಡೆಸಲು ನಿರ್ಧಾರ ಮಾಡಿ ಏಪ್ರಿಲ್ 11 ಮತದಾಣ ನಿಗದಿ ಮಾಡಿತ್ತು. ಜಿಲ್ಲಾ ಚುನಾವಣಾ ಅಧಿಕಾರಿಗಳು ಕೂಡ ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.

ಇತ್ತ ತಮಿಳುನಾಡಿನ ಸೇಲಂನ ವೈದ್ಯ ಡಾ.ಪದ್ಮರಾಜನ್ 170 ಬಾರಿ ಸೋತರೂ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. 1988ರಿಂದ ಸತತವಾಗಿ ಸ್ಪರ್ಧಿಸುತ್ತಿರುವ 60 ವರ್ಷದ ಪದ್ಮರಾಜನ್ ಲಿಮ್ಕಾ ಪುಸ್ತಕದಲ್ಲಿ ದಾಖಲೆ ಬರೆದಿದ್ದಾರೆ.

Comments

Leave a Reply

Your email address will not be published. Required fields are marked *