ಕೆಸಿಆರ್ ಶೀಘ್ರ ಚೇತರಿಸಿಕೊಳ್ಳುವಂತಾಗಲಿ: ಮೋದಿ, ಅಮಿತ್ ಶಾ ಶುಭ ಹಾರೈಕೆ

ನವದೆಹಲಿ: ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ.ಸಿ ಚಂದ್ರಶೇಖರ್ ರಾವ್ (KC Chandrashekhar Rao) ಅವರು ಶೀಘ್ರ ಚೇತರಿಸಿಕೊಳ್ಳುವಂತಾಗಲಿ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಶುಭ ಹಾರೈಸಿದ್ದಾರೆ.

ಈ ಸಂಬಂಧ ಎಕ್ಸ್ ಮಾಡಿರುವ ಮೋದಿ (Narendra Modi), ಅಮಿತ್ ಶಾ (Amitshah), ಆದಷ್ಟು ಬೇಗ ಗುಣಮುಖರಾಗಿ ರಾಜ್ಯದ ಅಭಿವೃದ್ಧಿಗೆ ಮತ್ತಷ್ಟು ಕೆಲಸಗಳನ್ನು ಮಾಡುವಂತಾಗಲಿ ಎಂದು ಬರೆದುಕೊಂಡಿದ್ದಾರೆ. ಕೆಸಿಆರ್ ಅವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಸುದ್ದಿ ಕೇಳಿ ಬೇಸರವಾಯಿತು. ಹೀಗಾಗಿ ಕೂಡಲೇ ಅವರು ಗುಣಮುಖರಾಗಲಿ ಎಂದು ಪ್ರಾರ್ಥಿಸುವುದಾಗಿ ಪ್ರಧಾನಿಗಳು ಹೇಳಿದ್ದಾರೆ. ಇತ್ತ ಅಮಿತ್ ಶಾ ಅವರು ಕೂಡ ಶೀಘ್ರ ಗುಣಮುಖರಾಗಲಿ ಎಂದು ಶುಭ ಹಾರೈಸಿದ್ದಾರೆ. ಇದನ್ನೂ ಓದಿ: ತೆಲಂಗಾಣ ಮಾಜಿ ಸಿಎಂ KCR ದಿಢೀರ್‌ ಆಸ್ಪತ್ರೆಗೆ ದಾಖಲು – ಬೆಂಬಲಿಗರಲ್ಲಿ ಆತಂಕ

ಕೆಸಿಆರ್ ಗೆ ಏನಾಯ್ತು..?: ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರು ಇಂದು ಮುಂಜಾನೆ 2 ಗಂಟೆ ಸುಮಾರಿಗೆ ಹೈದರಾಬಾದ್‍ನ ತಮ್ಮ ನಿವಾಸದಲ್ಲಿ ಕಾಲು ಜಾರಿ ಬಿದ್ದಿದ್ದಾರೆ. ಪರಿಣಾಮ ಅವರ ಸೊಂಟಕ್ಕೆ ಗಂಭೀರ ಏಟು ಬಿದ್ದಿದ್ದು, ಹೈದರಾಬಾದ್‍ನ ಯಶೋದಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಕ್ಯಾನಿಂಗ್ ಮಾಡಿದ ಬಳಿಕ ‌ ಏನಾಗಿದೆ ಅಂತಾ ತಿಳಿಯಲಿದೆ ಎಂದು ವೈದ್ಯರು ಹೇಳಿದ್ದಾರೆ.