ಪಾಕ್ ವಶದಲ್ಲಿ ನಮ್ಮ ವಿಂಗ್ ಕಮಾಂಡರ್ – ಬಿಡುಗಡೆಗೆ ಭಾರತ ಆಗ್ರಹ- ಬಿಡುಗಡೆ ಯಾಕೆ ಮಾಡಬೇಕು?

ನವದೆಹಲಿ: ಪಾಕಿಸ್ತಾನದ ಉಗ್ರರ ಅಡಗುದಾಣಗಳ ಮೇಲೆ ನಿನ್ನೆಯಷ್ಟೇ ಭಾರತ ವಾಯುದಾಳಿ ನಡೆಸುತ್ತಿದ್ದಂತೆ ಇಡೀ ದೇಶವೇ ಕುಣಿದು ಕುಪ್ಪಳಿಸಿತ್ತು. ಆದರೆ ಇಂದು ಬೆಳಗ್ಗೆ ಪಾಕಿಸ್ತಾನ ಯುದ್ಧ ವಿಮಾನಗಳು ಭಾರತದ ಗಡಿ ಪ್ರವೇಶ ಮಾಡಿ ದಾಳಿ ನಡೆಸಲು ಪ್ರಯತ್ನಿಸಿದ್ದು, ಪಾಕ್ ಯುದ್ಧ ವಿಮಾನಗಳನ್ನು ಹಿಂದಿಕ್ಕುವ ವೇಳೆ ಒಂದು ಮಿಗ್-21 ವಿಮಾನ ಪತನಗೊಂಡು ಕಮಾಂಡರ್ ಅಭಿನಂದನ್ ಪಾಕಿಸ್ತಾನದ ಸೈನ್ಯದ ವಶದಲ್ಲಿದ್ದಾರೆ.

ಇಂದು ಬೆಳಗ್ಗೆ ಇಬ್ಬರು ಪೈಲಟ್ ಗಳು ನಮ್ಮ ವಶದಲ್ಲಿದ್ದಾರೆ ಎಂದು ತಿಳಿಸಿದ್ದ ಪಾಕ್ ಅಧಿಕಾರಿಗಳು ಆ ಬಳಿಕ ನಮ್ಮ ಬಳಿ ಒಬ್ಬ ಕಮಾಂಡರ್ ಮಾತ್ರ ಇದ್ದಾರೆ ಎಂದು ಉಲ್ಟಾ ಹೊಡೆದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ವಿಡಿಯೋವನ್ನು ಬೆಳಗ್ಗೆ ಬಿಡುಗಡೆ ಮಾಡಿದ್ದು, ಪೈಲಟ್ ಡ್ರೆಸ್ ತೊಟ್ಟಿರುವ ವ್ಯಕ್ತಿ ತಾನು ಭಾರತ ಯೋಧ, ಭಾರತೀಯ ಎಂದು ಹೇಳಿದ್ದಾರೆ. ಈ ವಿಡಿಯೋದಲ್ಲಿ ಅವರನ್ನು ಕೈ ಕಟ್ಟಿಹಾಕಿ ಹಲ್ಲೆ ನಡೆಸಿರುವ ವಿಡಿಯೋವನ್ನು ಬಿಡುಗಡೆ ಮಾಡಿ ಬಳಿಕ ಭಾರತದ ಕಡೆಯಿಂದ ಆಕ್ರೋಶ ಕೇಳಿ ಬಂದ ಬೆನ್ನಲ್ಲೇ ತಮ್ಮ ಟ್ವಿಟ್ಟರ್ ಖಾತೆಗಳಿಂದ ವಿಡಿಯೋವನ್ನು ಡಿಲೀಟ್ ಮಾಡಲಾಗಿದೆ.

ಭಾರತದ ಗಡಿ ದಾಟಿದ ಪಾಕಿಸ್ತಾನದ 3 ವಿಮಾನಗಳು ಪೂಂಚ್, ನೌಷೇರಾ, ಕೃಷ್ಣಘಟಿಯಲ್ಲಿ ದಾಳಿಗೆ ಯತ್ನ ನಡೆಸಿದ್ದವು. ಆದರೆ 3 ವಿಮಾನಗಳ ಪೈಕಿ ಪಾಕಿಸ್ತಾನದ ಎಫ್-16 ಒಂದು ಯುದ್ಧ ವಿಮಾನವನ್ನು ಭಾರತ ಹೊಡೆದುರುಳಿತ್ತು. ಇನ್ನೆರಡು ವಿಮಾನಗಳನ್ನು ಮಿಗ್-21 ವಿಮಾನವನ್ನು ಅಟ್ಟಾಡಿಸಿಕೊಂಡು ಹೋದ ವೇಳೆ ಪಾಕಿಸ್ತಾನವೂ ಭಾರತದ ಒಂದು ಮಿಗ್-21 ವಿಮಾನವನ್ನು ನೆಲಕ್ಕುರುಳಿಸಿತ್ತು. ಈ ವೇಳೆ ಒಬ್ಬ ಪೈಲಟ್ ನನ್ನು ಜೀವಂತವಾಗಿ ಸೆರೆ ಹಿಡಿರುವುದಾಗಿ ಪಾಕಿಸ್ತಾನ ಹೇಳಿದೆ.

ವಿಂಗ್ ಕಮಾಂಡರ್ ದೃಶ್ಯಗಳನ್ನು ಪಾಕ್ ರಿಲೀಸ್ ಮಾಡಿದ್ದರೂ ಕೂಡ ನಾವು ಸೇನೆ ಮೇಲಿನ ಗೌರವಾರ್ಥ ಆ ವಿಂಗ್ ಕಮಾಂಡರ್ ದೃಶ್ಯ ಅಥವಾ ಫೋಟೋವನ್ನು ನಾವು ಪ್ರಕಟಿಸುವುದಿಲ್ಲ.

ಇತ್ತ ಪಾಕಿಸ್ತಾನ ಬಳಿ ಭಾರತದ ಕಮಾಂಡರ್ ಇದ್ದರೆ ಎಂಬುವುದು ಖಚಿತವಾಗುತ್ತಿದಂತೆ ಭಾರತ, ಪಾಕಿಸ್ತಾನದ ಉಪ ಹೈಕಮೀಷನರ್‍ಗೆ ಕೇಂದ್ರ ಸರ್ಕಾರ ದಿಢೀರ್ ಬುಲಾವ್ ನೀಡಿತ್ತು. ಅಲ್ಲದೇ ಪಾಕಿಸ್ತಾನ ವಶಕ್ಕೆ ಪಡೆದ ವಿಂಗ್ ಕಮಾಂಡರ್ ಅಭಿನಂದನ್ ಸುರಕ್ಷತೆ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದೆ. ಅಲ್ಲದೇ ಜೀನಿವಾ ಒಪ್ಪಂದ ಆರ್ಟಿಕಲ್ 3 ಪ್ರಕಾರ, ಪಾಕ್ ಬಿಡುಗಡೆ ಮಾಡಬೇಕು ಎಂದು ಕೋರಿದೆ.

ಕಾರ್ಗಿಲ್ ಯುದ್ಧದ ವೇಳೆ ಪಾಕ್ ಸೈನಿಕರಿಗೆ ಸಿಕ್ಕಿಬಿದ್ದಿದ್ದ ಮಿಗ್ ಪೈಲಟ್ ನಚಿಕೇತರನ್ನು ರಿಲೀಸ್ ಮಾಡಿದಂತೆಯೇ ಅಭಿನಂದನ್‍ರನ್ನು ರಿಲೀಸ್ ಮಾಡಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಏನಿದು ಜಿನೀವಾ ಒಪ್ಪಂದ..?
ಎರಡನೇ ಮಹಾಯುದ್ಧದ ಬಳಿಕ 1949ರಲ್ಲಿ 196 ದೇಶಗಳ ನಡುವೆ ಏರ್ಪಟ್ಟ ವೇಳೆ ಒಪ್ಪಂದ ನಡೆದಿತ್ತು. ಈ ಒಪ್ಪಂದ ಪ್ರಕಾರ ಯುದ್ಧ ಕೈದಿಗಳನ್ನು ಮಾನವೀಯವಾಗಿ ನಡೆಸಿಕೊಳ್ಳಬೇಕು. ಗಾಯಗೊಂಡ, ಅನಾರೋಗ್ಯಕ್ಕೆ ತುತ್ತಾದ ಯುದ್ಧ ಕೈದಿಗಳಿಗೆ ಚಿಕಿತ್ಸೆ ನೀಡಬೇಕು. ಜಿನೀವಾ ಒಪ್ಪಂದ ಆರ್ಟಿಕಲ್ 3 ಅಘೋಷಿತ ಯುದ್ಧಕ್ಕೆ ಸಂಬಂಧಿಸಿದ್ದಾಗಿದೆ. ಯುದ್ಧ ಕೈದಿಯ ಕೊಲೆ, ಹಲ್ಲೆ, ಶಿರಚ್ಛೇದ, ಒತ್ತೆಯಂತಹ ಕೃತ್ಯಗಳನ್ನು ಮಾಡಬಾರದು. ಕಾನೂನು ಪ್ರಕ್ರಿಯೆಗಳನ್ನು ಮಾಡದೇ, ಆರೋಪ ಸಾಬೀತಾಗದೇ ಶಿಕ್ಷೆ ನೀಡಬಾರದು. ಆರೋಪ ಸಾಬೀತಾಗದೇ ಇದ್ದಲ್ಲಿ ಯುದ್ಧ ಕೈದಿಯನ್ನು ಅವರ ದೇಶಕ್ಕೆ ಒಪ್ಪಿಸಬೇಕು ಎಂಬ ನಿಯಮಗಳನ್ನು ರೂಪಿಸಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *