2019ರಲ್ಲಿ ಹೆಚ್ಚಿನ ಸ್ಥಾನ ಪಡೆದು ಮತ್ತೆ ಅಧಿಕಾರ ಪಡೆಯುತ್ತೇವೆ: ಪ್ರಧಾನಿ ಮೋದಿ

ನವದೆಹಲಿ: ಕಳೆದ 4 ವರ್ಷಗಳ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೈಗೊಳ್ಳಲಾಗಿರುವ ಜನಪರ ಕಾರ್ಯಕ್ರಮಗಳೇ ಮುಂದಿನ ಚುನಾವಣೆಯಲ್ಲಿ ನಮ್ಮನ್ನು ಗೆಲ್ಲಿಸುತ್ತವೆ. 2014 ರ ಚುನಾವಣೆಯಲ್ಲಿ ಪಡೆದ ಸ್ಥಾನಗಳಿಗಿಂತಲೂ ಹೆಚ್ಚಿನ ಸ್ಥಾನ ಪಡೆದು ಮತ್ತೆ ಅಧಿಕಾರ ಪಡೆಯುತ್ತೇವೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳಿಗೆ ವಿಶೇಷ ಸಂದರ್ಶನ ನೀಡಿ ಮಾತನಾಡಿದ ಅವರು, ಪ್ರತಿಪಕ್ಷಗಳ ಮಹಾಮೈತ್ರಿಯಿಂದ ರಚಿಸಿದ ಸಮ್ಮಿಶ್ರ ಸರ್ಕಾರಗಳು ಜನರಿಗೆ ಕಹಿ ಅನುಭವವನ್ನು ನೀಡಿದೆ. ಅದು ಜನರೊಂದಿಗೆ ಮೈತ್ರಿ ಸಾಧಿಸಲಾರದು. ದೇಶದ ಜನರು ಸ್ಥಿರ ಹಾಗೂ ಸದೃಢ ಸರ್ಕಾರ ಬೇಕೆಂದು ಬಯಸುತ್ತಿದ್ದಾರೆ ಎಂದು ವಿರೋಧಿ ಪಕ್ಷಗಳ ಮಹಾಮೈತ್ರಿ ಕುರಿತು ವಾಗ್ದಾಳಿ ನಡೆಸಿದರು.

ಇದೇ ವೇಳೆ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿದ್ದು ವಿಪಕ್ಷಗಳ ಅಹಂಕಾರವನ್ನು ತೋರಿಸುತ್ತದೆ ಎಂದು ಕಿಡಿಕಾರಿದ ಪ್ರಧಾನಿ, ನಾವು ಕಾಮ್‍ದಾರ್ ಗಳೇ ಹೊರತು ನಾಮಧಾರ್ ಗಳಲ್ಲ. ನಮ್ಮಲ್ಲಿ ಅಂತಹ ಆಯ್ಕೆಗಳಿಲ್ಲ, ಗೋರಕ್ಷಣೆ ಸಂಬಂಧಿ ಹಿಂಸೆ, ಹಲ್ಲೆ, ಹತ್ಯೆ ಪ್ರಕರಣಗಳ ನಿಯಂತ್ರಣಕ್ಕಾಗಿ ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು.

ನಮ್ಮ ಸರ್ಕಾರದ ಅವಧಿಯಲ್ಲಿ ಆರ್ಥಿಕ ಅವ್ಯವಹಾರಗಳಿಗೆ ಕಡಿವಾಣ ಹಾಕಲಾಗಿದ್ದು, ಉದ್ಯಮ ಸ್ನೇಹಿ ವಾತಾವರಣ ಸೃಷ್ಟಿಗೆ ಸರ್ಕಾರ ಬದ್ಧವಾಗಿದೆ. ಕಳೆದ ಒಂದು ವರ್ಷದಲ್ಲಿ 45 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ. ದೇಶದಲ್ಲಿ ಪ್ರವಾಸೋದ್ಯಮ, ನವ ಉದ್ಯಮ, ನಿರ್ಮಾಣ ಕ್ಷೇತ್ರ ಹಾಗೂ ಮುದ್ರಾ ಯೋಜನೆ ಅಡಿಯೂ ಹಲವು ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲಾಗಿದೆ. ರಫೇಲ್ ವಿವಾದದ ಬಗ್ಗೆ ಕಾಂಗ್ರೆಸ್ ಸುಳ್ಳು ಹೆಣೆಯುತ್ತಿದೆ, ರಫೇಲ್ ಒಪ್ಪಂದ ಸರ್ಕಾರದ ಪ್ರಮಾಣಿಕ ಒಪ್ಪಂದವಾಗಿದೆ. ಭಾರತ ಮತ್ತು ಅಮೆರಿಕ ಜಗತ್ತಿನ ಆರ್ಥಿಕತೆಯ ಎರಡು ಇಂಜಿನ್‍ಗಳು, ಅಮೆರಿಕದೊಂದಿಗೆ ನಮ್ಮ ಸಂಬಂಧ ಮುಂದುವರಿಯಲಿದೆ ಎಂದು ಸ್ಪಷ್ಟನೆ ನೀಡಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

Comments

Leave a Reply

Your email address will not be published. Required fields are marked *