ಜನರ ಇಚ್ಛೆಯಂತೆ ಆನೆ, ನನ್ನ ಪ್ರತಿಮೆಗಳ ನಿರ್ಮಾಣ – ಸುಪ್ರೀಂಗೆ ಮಾಯಾವತಿ ಪ್ರಮಾಣಪತ್ರ

ಲಕ್ನೋ: ಜನರ ಇಚ್ಛೆಯಂತೆ ಉತ್ತರ ಪ್ರದೇಶದಲ್ಲಿ ಬಹುಜನ ಸಮಾಜ ಪಕ್ಷದ (ಬಿಎಸ್‍ಪಿ) ಚಿಹ್ನೆ ಆನೆ ಹಾಗೂ ನನ್ನ ಪ್ರತಿಮೆಗಳನ್ನು ನಿರ್ಮಿಸಿದ್ದೇವೆ ಎಂದು ಮಾಯಾವತಿ ಸುಪ್ರೀಂಕೋರ್ಟಿಗೆ ಪ್ರಮಾಣಪತ್ರ ಸಲ್ಲಿಸಿದ್ದಾರೆ.

ಸಾರ್ವಜನಿಕ ಹಣದಲ್ಲಿಯೇ ಉತ್ತರ ಪ್ರದೇಶದ ಲಕ್ನೋ ಹಾಗೂ ನೊಯ್ಡಾದಲ್ಲಿ ಆನೆ ಹಾಗೂ ಮಾಯಾವತಿ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ಸರ್ಕಾರಿ ಹಣದಲ್ಲಿ ಕೇವಲ ಒಂದು ಪಕ್ಷದ ಪರವಾಗಿ ಪ್ರತಿಮೆಗಳನ್ನು ನಿರ್ಮಿಸಿದ್ದು ಸೂಕ್ತವಲ್ಲ. ಹೀಗಾಗಿ ಪ್ರತಿಮೆಗಳ ನಿರ್ಮಾಣದ ಸಂಪೂರ್ಣ ವೆಚ್ಚವನ್ನು ಬಿಎಸ್‍ಪಿ ಭರಿಸಬೇಕು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ರಂಜನ್ ಗೊಗೋಯ್ ಅವರು ಫೆಬ್ರವರಿ 8ರಂದು ಅಭಿಪ್ರಾಯಪಟ್ಟಿದ್ದರು.

ಈ ಪ್ರಕರಣದ ವಿಚಾರಣೆ ಸಮಯದಲ್ಲಿ ಮಾಯಾವತಿ ಜನರ ಇಚ್ಛೆ ಪ್ರಕಾರ ಪ್ರತಿಮೆಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಏನಿದು ಪ್ರಕರಣ?:
ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿದ್ದ ಮಾಯಾವತಿ ಅವರು ಕೋಟ್ಯಂತರ ಹಣ ವೆಚ್ಚ ಮಾಡಿ ದಲಿತ್ ಪವರ್ ಹೌಸ್, ಬಿಎಸ್‍ಪಿ ಚಿಹ್ನೆ ಆನೆ ಹಾಗೂ ಪಕ್ಷ ಸಂಸ್ಥಾಪಕ ಕಾನ್ಶಿ ರಾಮ್ ಪ್ರತಿಮೆ ನಿರ್ಮಾಣ ಮಾಡಿದ್ದಾರೆ. ಬಡವರ ಹೆಸರಿನಲ್ಲಿ ಸಾರ್ವಜನಿಕ ಹಣವನ್ನು ದುರ್ಬಳಕೆ ಮಾಡಲಾಗಿದೆ ಎಂದು ಆರೋಪಿ ವಕೀಲರಾದ ರವಿಕಾಂತ್ ಹಾಗೂ ಸುಕುಮಾರ್ ಅವರು 2019ರಲ್ಲಿ ಕೋರ್ಟ್ ಮೆಟ್ಟಿಲೇರಿದ್ದರು.

2012ರ ಉತ್ತರ ವಿಧಾನಸಭಾ ಚುನಾವಣೆ ವೇಳೆ ಮಾಯಾವತಿ ಹಾಗೂ ಆನೆಯ ಪ್ರತಿಮೆಗಳಿಗೆ ಹೊದಿಕೆ ಹೊದಿಸಬೇಕು ಎಂದು ಚುನಾವಣಾ ಆಯೋಗ ಆದೇಶ ಹೊರಡಿಸಿತ್ತು. 2014ರಲ್ಲಿ ಸುಪ್ರೀಂಕೋರ್ಟ್ ವಿಚಾರಣೆ ನಡೆಸಿದಾಗ, ಪ್ರತಿಮೆ ನಿರ್ಮಾಣಕ್ಕೆ ಬಜೆಟ್‍ನಲ್ಲಿ ಅನುಮತಿ ಸಿಕ್ಕಿತ್ತು. ಹೀಗಾಗಿ ನಿರ್ಮಾಣ ಮಾಡಿದ್ದೇವೆ ಎಂದು ಬಿಎಸ್‍ಪಿ ತಿಳಿಸಿತ್ತು.

Comments

Leave a Reply

Your email address will not be published. Required fields are marked *