ರಾಜ್ಯ ಸರ್ಕಾರದಿಂದ ಬುಧವಾರ ರೈತರ ಸಾಲ ಸಂಪೂರ್ಣ ಮನ್ನಾ?

ಬೆಂಗಳೂರು:  ಚುನಾವಣೆ ವೇಳೆ ನೀಡಿದ ಭರವಸೆಯಂತೆ ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಬುಧವಾರ ರೈತರ ಸಾಲವನ್ನು ಮನ್ನಾ ಮಾಡುವ ಸಾಧ್ಯತೆಯಿದೆ.

ರೈತರ ಸಾಲಮನ್ನಾ ಮಾಡದಿದ್ದಕ್ಕೆ ಸಿಟ್ಟುಗೊಂಡ ಬಿಜೆಪಿ ಸೋಮವಾರ ರಾಜ್ಯಾದ್ಯಂತ ಬಂದ್ ಗೆ ಕರೆಕೊಟ್ಟಿತ್ತು, ಆದ್ರೆ ಕೆಲವೆಡೆ ಬಂದ್ ಗೆ ಬೆಂಬಲ ವ್ಯಕ್ತವಾದ್ರೆ, ಇನ್ನು ಕೆಲವೆಡೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಟ್ಟಿನಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಕುಮಾರಸ್ವಾಮಿಯವರಿಗೆ ಸಾಲಮನ್ನಾ ಮಾಡುವಂತೆ ಒತ್ತಾಯ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಸಿಎಂ ಅವರು ಈಗಾಗಲೇ ಸಾಲ ಮನ್ನಾ ಅಗತ್ಯತೆ ಬಗ್ಗೆ ಕೈ ನಾಯಕರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

ಕುಮಾರಸ್ವಾಮಿ ಮಂಡಿಸಿದ ಸಾಲ ಮನ್ನಾ ವಾದಕ್ಕೆ ಕಾಂಗ್ರೆಸ್‍ನಿಂದ ತಾತ್ವಿಕ ಒಪ್ಪಿಗೆ ಸೂಚಿಸಿದೆ ಎನ್ನಲಾಗಿದ್ದು, ಇಂದು ಹಣಕಾಸು ಸಚಿವಾಲಯದ ಅಧಿಕಾರಿಗಳ ಜೊತೆ ಸಿಎಂ ಸಭೆ ನಡೆಸಲಿದ್ದಾರೆ. ಈ ವೇಳೆ ಅಧಿಕಾರಿಗಳೊಂದಿಗೆ ಸಾಲಮನ್ನಾ ವಿಚಾರದ ಬಗ್ಗೆ ಪ್ರಸ್ತಾಪಿಸಿ, ಚರ್ಚೆ ನಡೆಸಲಿದ್ದಾರೆ. ಬಳಿಕ ನಾಳೆ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ.

ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ್ರೂ, ಕಾಂಗ್ರೆಸ್- ಜೆಡಿಎಸ್ ಮೈತ್ರಿಯಿಂದಾಗಿ ಬಿಜೆಪಿ ಅಧಿಕಾರ ಹಿಡಿಯುವಲ್ಲಿ ವಿಫಲವಾಯಿತು. ಆದ್ರೂ ರಾಜ್ಯಪಾಲರ ಅನುಮತಿ ಪಡೆದು ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಅಲ್ಲದೇ ರೈತರ ಸಾಲಮನ್ನಾ ಮಾಡುವುದಾಗಿ ಕೂಡ ಘೋಷಣೆ ಮಾಡಿದ್ದರು. ಆದ್ರೆ ಇತ್ತ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ರಾಜ್ಯಪಾಲರ ನಡೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದವು. ಹೀಗಾಗಿ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಮರುದಿನವೇ ಬಹುಮತ ಸಾಬೀತು ಪಡಿಸುವಂತೆ ಸೂಚನೆ ನೀಡಿತ್ತು. ವಿಧಾನಸಭಾ ಕಲಾಪದಲ್ಲಿ ಬಹುಮತ ಸಾಬೀತು ಮಾಡದೇ ಬಿಎಸ್‍ವೈ ಸದನದಿಂದ ಹೊರಟು ರಾಜ್ಯಪಾಲರ ಬಳಿ ತೆರಳಿ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು.

ಬಳಿಕ ಎಚ್ ಡಿ ಕುಮಾರಸ್ವಾಮಿ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ರು. ಅಲ್ಲದೇ ಬಹುಮತ ಸಾಬೀತು ಪಡಿಸಿ ವಿಧಾನಸಭಾ ಕಲಾಪದಲ್ಲಿ ಬಿಜೆಪಿ ವಿರುದ್ಧ ಕೆಂಡಾಮಂಡಲರಾದ್ರು. ಮುಖ್ಯಮಂತ್ರಿಯ ಬಳಿಕ ಬಿಎಸ್ ಯಡಿಯೂರಪ್ಪ ಅವರು ಕಲಾಪದಲ್ಲಿ ಮಾತನಾಡಿ ಜೆಡಿಎಸ್ ಹಾಗೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ರು. ಅಲ್ಲದೇ ಇಂದು ಸಂಜೆಯೊಳಗೆ ರೈತರ ಸಾಲಮನ್ನಾ ಮಾಡದಿದ್ದರೆ ರಾಜ್ಯಾದ್ಯಂತ ಬಂದ್ ಮಾಡಲಾಗುವುದು ಅಂತ ಹೇಳಿ ಸಭಾ ತ್ಯಾಗ ಮಾಡಿದ್ದರು.

Comments

Leave a Reply

Your email address will not be published. Required fields are marked *