– ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಪ್ರಕಟ
– ನಿಖಿಲ್ ಗೆಲ್ಲಿಸಲು ಎಚ್‍ಡಿಕೆ ತಂತ್ರವಂತೆ
– ಬಿಜೆಪಿಯಿಂದ ಈ ವದಂತಿ ಸೃಷ್ಟಿ: ಶರವಣ
ಬೆಂಗಳೂರು: ಮೊದಲ ಹಂತದ ಮತದಾನಕ್ಕೂ ಎರಡು ದಿನ ಮೊದಲೇ ಸಿಎಂ ಕುಮಾರಸ್ವಾಮಿ ಆಸ್ಪತ್ರೆಗೆ ದಾಖಲಾಗುತ್ತಾರೆ ಎನ್ನುವ ವದಂತಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗಿದೆ.
ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪುತ್ರ ನಿಖಿಲ್ ಅವರನ್ನು ಗೆಲ್ಲಿಸಲು ಸಿಎಂ ಕುಮಾರಸ್ವಾಮಿ ಅವರು ಈ ತಂತ್ರ ಅನುಸರಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಮತದಾರರಲ್ಲಿ ಕೊನೆ ಕ್ಷಣದಲ್ಲಿ ಅನುಕಂಪದ ಅಲೆ ಸೃಷ್ಟಿಸಲು ಸಿಎಂ ಈ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.

ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಯಾರು ಹರಿಬಿಟ್ಟಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ. ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಜೆಡಿಎಸ್ ವಕ್ತಾರ ಶರವಣ ಅವರು, ಬಿಜೆಪಿಯವರು ಇಂತಹ ವದಂತಿಗಳನ್ನು ಸೃಷ್ಟಿಸುವಲ್ಲಿ ನಿಸ್ಸಿಮರು. ರಾಜ್ಯದ ರಾಜಕಾರಣದಲ್ಲಿ ಸುಳ್ಳು ಮೊದಲೇ ಅಥವಾ ಬಿಜೆಪಿ ಮೊದಲೇ ಎನ್ನುವ ಪ್ರಶ್ನೆ ಬಂದಾಗ ಬಿಜೆಪಿಯೇ ಮೊದಲು ಎನ್ನುವ ಉತ್ತರ ಬರುತ್ತದೆ. ಸಿಎಂ ಕುಮಾರಸ್ವಾಮಿ ಅವರು ನೀಡಿದ ಕೊಡುಗೆಯನ್ನು ಬಿಜೆಪಿಯವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಿಎಂ ವಿರುದ್ಧ ಸುಳ್ಳು ವದಂತಿ ಸುದ್ದಿಗಳನ್ನು ಹರಿ ಬಿಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿ, ಸಾಮಾಜಿಕ ಜಾಲತಾಣದಲ್ಲಿ ಬರುವ ಇಂತಹ ವದಂತಿಗಳ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಸಿಎಂ ಕುಮಾರಸ್ವಾಮಿ ಅವರು ಕೂಡ ಈ ವಿಚಾರವನ್ನು ಗಂಭೀರವಾಗಿ ತಗೆದುಕೊಳ್ಳಬಾರದು ಎಂದರು.
ಸಿಎಂ ಕುಮಾರಸ್ವಾಮಿ ಪ್ರತಿ ವಿಚಾರಕ್ಕೂ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಇದರಿಂದ ಅವರಿಗೆ ಪ್ರಚಾರ ಸಿಗುತ್ತದೆ. ಮಂಡ್ಯದಲ್ಲಿ ಸಿಎಂ ಕುಮಾರಸ್ವಾಮಿ ಅವರ ಪುತ್ರ ನಿಖಿಲ್‍ಗೆ ನಾನು ಪ್ರಬಲ ಪ್ರತಿಸ್ಪರ್ಧಿ. ಹೀಗಾಗಿ ನನ್ನನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

Leave a Reply