ಸುಪ್ರೀಂ ತೀರ್ಪನ್ನು ಯಾರೂ ಗೆಲುವು, ಸೋಲು ಎಂದು ಭಾವಿಸಬಾರದು – ಮೋಹನ್ ಭಾಗವತ್

ನವದೆಹಲಿ: ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಿರುವ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಇದನ್ನು ಯಾರೂ ಗೆಲವು, ಸೋಲು ಎಂದು ಭಾವಿಸಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮನ ದೇವಸ್ಥಾನ ನಿರ್ಮಿಸಲು ನಾವೂ ಸಹ ಸಹಕರಿಸುತ್ತೇವೆ ಎಂದು ಭಾಗವತ್ ಹೇಳಿದ್ದಾರೆ.

ಸುಪ್ರೀಂ ಕೋರ್ಟಿನ ತೀರ್ಪನ್ನು ಸ್ವಾಗತಿಸುತ್ತೇವೆ. ದಶಕಗಳಿಂದ ನಡೆಯುತ್ತಿದ್ದ ಪ್ರಕರಣ ಇಂದು ಇತ್ಯರ್ಥವಾಗಿರುವುದು ಸಂತಸ ತಂದಿದೆ. ಇದನ್ನು ಯಾರೂ ಗೆಲುವು ಸೋಲು ಎಂದು ಭಾವಿಸಬಾರದು. ನಾವು ಹಿಂದಿನದನ್ನು ಮರೆಯಬೇಕಿದೆ. ನಮ್ಮಿಂದ ನಿರೀಕ್ಷಿಸಲಾದ ಕರ್ತವ್ಯಗಳನ್ನು ನಿರ್ವಹಿಸಬೇಕಿದೆ. ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವಲ್ಲಿ ಪ್ರತಿಯೊಬ್ಬರ ಪ್ರಯತ್ನವನ್ನು ನಾವು ಸ್ವಾಗತಿಸುತ್ತೇವೆ ಎಂದು ಕರೆ ನೀಡಿದರು.

ಮುಂದಿನ ಯಾವುದೇ ಆಂದೋಲನ ಅಥವಾ ರಾಜಕೀಯ ಆಂದೋಲನದಲ್ಲಿ ಆರ್‌ಎಸ್‌ಎಸ್ ಭಾಗಿಯಾಗುವುದಿಲ್ಲ. ಚಾರಿತ್ರ್ಯ ನಿರ್ಮಾಣದ ಕಡೆ ಗಮನಹರಿಸಲಿದೆ ಎಂದು ಸ್ಪಷ್ಟಪಡಿಸಿದರು.

ಎಲ್ಲರೂ ಒಗ್ಗಟ್ಟಿನಿಂದ ಬದುಕಬೇಕು, ನಾವು ಎಲ್ಲ ಧರ್ಮಗಳನ್ನು ಹೊರತಾಗಿ ಭಾರತೀಯ ಪ್ರಜೆಗಳು ಎಂದು ಅಭಿಪ್ರಾಯಪಟ್ಟರು.

ಇಂದು ಬೆಳಗ್ಗೆ ರಾಮಜನ್ಮ ಭೂಮಿ ಕುರಿತು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಪಂಚಸದಸ್ಯರ ಪೀಠ ತೀರ್ಪು ಪ್ರಕಟಿಸಿದೆ. ಮಸೀದಿ ನಿರ್ಮಾಣಕ್ಕೆ ಬೇರೆ ಸ್ಥಳದಲ್ಲಿ 5 ಎಕರೆ ಜಮೀನು ನೀಡಬೇಕು. ಮಂದಿರ ನಿರ್ಮಾಣಕ್ಕೆ 3 ತಿಂಗಳಲ್ಲಿ ಸಮಿತಿ ರಚಿಸುವಂತೆ ಸುಪ್ರೀಂ ಕೋರ್ಟ್ ಆದೇಶದಲ್ಲಿ ತಿಳಿಸಿದೆ.

Comments

Leave a Reply

Your email address will not be published. Required fields are marked *