ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತ್ರಿವಳಿ ತಲಾಖ್ ರದ್ದು: ರಾಹುಲ್ ಗಾಂಧಿ

– ನರೇಂದ್ರ ಮೋದಿ ಕಿಂಗ್ ಇಮೇಜ್ ಮುಕ್ತಾಯವಾಯಿತು

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತ್ರಿವಳಿ ತಲಾಖ್ ಕಾನೂನನ್ನು ರದ್ದು ಮಾಡುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ನಗರದ ಜವಾಹರಲಾಲ್ ನೆಹರು ಸ್ಟೇಡಿಯಂನಲ್ಲಿ ನಡೆದಿದ್ದ ಎಐಸಿಸಿ ಅಲ್ಪಸಂಖ್ಯಾತ ವಿಭಾಗ ರಾಷ್ಟ್ರೀಯ ಸಭೆಯಲ್ಲಿ ಈ ಹೇಳಿಕೆ ನೀಡಿದ್ದಾರೆ. ಇದೇ ವೇಳೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಿರುದ್ಧ ಕಿಡಿಕಾರಿದ ಅವರು, ಆರ್‍ಎಸ್‍ಎಸ್ ನಾಗ್ಪುರದಿಂದ ದೇಶವನ್ನು ಆಡಳಿತ ಮಾಡಲು ಮುಂದಾಗುತ್ತಿದೆ. ನರೇಂದ್ರ ಮೋದಿ ಅದರ ಮುಖವಾಗಿದ್ದು, ಮೋಹನ್ ಭಾಗವತ್ ರಿಮೋಟ್ ಕಂಟ್ರೋಲ್ ಹಿಡಿದಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನು ಓದು: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ರೈತರ ಸಾಲಮನ್ನಾ : ರಾಹುಲ್ ಗಾಂಧಿ

ಭಾರತೀಯ ಸಂಸ್ಥೆಗಳು ಯಾವುದೇ ಪಕ್ಷಕ್ಕೆ ಒಳಪಟ್ಟಿಲ್ಲ. ದೇಶದ ಜನರನ್ನು ರಕ್ಷಿಸುವುದು ಆ ಸಂಸ್ಥೆಗಳ ಕೆಲಸವಾಗಿದೆ. ಅಂತಹ ಸಂಸ್ಥೆಗಳನ್ನು ಕಾಂಗ್ರೆಸ್ ಅಥವಾ ಬೇರೆ ಯಾವುದೇ ಪಕ್ಷವಾಗಿದ್ದರೂ ರಕ್ಷಿಸಬೇಕಾಗುತ್ತದೆ ಎನ್ನುವ ಮೂಲಕ ರಾಹುಲ್ ಗಾಂಧಿ ಅವರು, ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಪರ ಬ್ಯಾಟ್ ಬೀಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಕಿಂಗ್ ಇಮೇಜ್ ಮುಕ್ತಾಯವಾಯಿತು. ಅವರನ್ನು ನನ್ನ ಮುಂದೆ 10 ನಿಮಿಷ ಕಳುಹಿಸುವಂತೆ ಬಿಜೆಪಿಯವರಿಗೆ ಕೇಳಿಕೊಳ್ಳುತ್ತೇನೆ. ಮೋದಿ ಅವರು ರಾಷ್ಟ್ರೀಯ ಭದ್ರತೆ, ರಾಫೇಲ್ ಹಗರಣದ ಬಗ್ಗೆ ಮಾತನಾಡುತ್ತಾರೆ. ನಮ್ಮ ಜೊತೆಗೆ ಐದೇ ಐದು ನಿಮಿಷ ಚರ್ಚೆ ಮಾಡಿದರೆ ನೀರಿಗೆ ನೀರು, ಹಾಲಿಗೆ ಹಾಲು ಸಿಗುತ್ತದೆ ಎಂದು ಕುಟುಕಿದರು.

ಬಿಜೆಪಿಯವರು ಕಳೆದ ಮೂರು ತಿಂಗಳಿಂದ ತಾವೇ ಉನ್ನತ ಸ್ಥಾನದಲ್ಲಿದ್ದಾರೆ ಎನ್ನುವಂತೆ ನಡೆದುಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಪ್ರಧಾನಿ ನರೇಂದ್ರ ಮೋದಿ ಅವರ ನಡೆಯನ್ನು ಬಹಿರಂಗಗೊಳಿಸಿದೆ. ಅವರು ಸುದ್ದಿಗೋಷ್ಠಿ ನಡೆಸುವುದಿಲ್ಲ. ದೇಶದ ಎಲ್ಲಾ ವಿಪಕ್ಷಗಳು ಸೇರಿ ಬಿಜೆಪಿ ಹಾಗೂ ಪ್ರಧಾನಿ ಮೋದಿ ಅರವರನ್ನು ಸೋಲಿಸಲು ಮುಂದಾಗಿವೆ ಎಂದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *