ಕೂಲಿ ಕಾರ್ಮಿಕನ ಮೇಲೆ ಕಾಡಾನೆ ದಾಳಿ – ಪ್ರಾಣಾಪಾಯದಿಂದ ಪಾರು

ಸಾಂದರ್ಭಿಕ ಚಿತ್ರ

ಮಡಿಕೇರಿ: ಕೂಲಿ ಕಾರ್ಮಿಕನ ಮೇಲೆ ಕಾಡಾನೆ ದಾಳಿ ನಡೆಸಿರುವ ಘಟನೆ ಕೊಡಗು ವಿರಾಜಪೇಟೆ ತಾಲೂಕಿನ ಕುರ್ಚಿ ಗ್ರಾಮದಲ್ಲಿ ನಡೆದಿದೆ.

ಮಾರಾ (55) ಗಾಯಗೊಂಡ ಕಾರ್ಮಿಕರಾಗಿದ್ದು, ಆನೆ ದಾಳಿಯ ರಭಸಕ್ಕೆ ಎಡಗಾಲು ಸೀಳಿ ಹೋಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇಂದು ತೋಟದ ಬಳಿ ನಡೆದುಕೊಂಡು ಬರುವಾಗ ಆನೆ ಏಕಾಏಕಿ ದಾಳಿ ನಡೆಸಿದೆ. ಕೂಡಲೇ ಸ್ಥಳೀಯರು ಅವರನ್ನು ಶ್ರೀಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶ್ರೀಮಂಗಲ ವನ್ಯಜೀವಿ ವಲಯದ ಆರ್ ಎಫ್‍ಒ ವೀರೇಂದ್ರರವರು ಕಾರ್ಮಿಕರನ್ನು ಗೊಣಿಕೊಪ್ಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ವೇಳೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಾರ್ವಜನಿಕರು ಕೂಡಲೇ ಈ ಭಾಗದಲ್ಲಿ ಕಾಡಾನೆ ಹಾವಳಿಯನ್ನು ತಡೆಗಟ್ಟುವಂತೆ ಒತ್ತಾಯ ಮಾಡಿದರು. ಅಲ್ಲದೇ ಕಾರ್ಮಿಕನ ದಿನ ನಿತ್ಯದ ಖರ್ಚಿಗೆ ಹಣ ನೀಡುವಂತೆ ಮತ್ತು ಸಂಪೂರ್ಣ ವೈದ್ಯಕೀಯ ವೆಚ್ಚ ಭರಿಸಲು ಒತ್ತಾಯ ಮಾಡಿದರು. ಸಾರ್ವಜನಿಕರ ಮನವಿಗೆ ಸ್ಪಂದಿಸಿದ ಅಧಿಕಾರಿಗಳು 10 ಸಾವಿರ ರೂ. ನೀಡಿ, ಅರಣ್ಯ ಇಲಾಖೆಯ ವತಿಯಿಂದ ವೈದ್ಯಕೀಯ ವೆಚ್ಚ ಭರಿಸುವುದಾಗಿ ಭರವಸೆ ನೀಡಿದರು.

ಘಟನೆ ಬಗ್ಗೆ ಮಾಹಿತಿ ಪಡೆದ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷರಾದ ಮನು ಸೋಮಯ್ಯ ಆಸ್ಪತ್ರೆಗೆ ಭೇಟಿ ನೀಡಿ ಕಾರ್ಮಿಕನ ಆರೋಗ್ಯ ವಿಚಾರಿಸಿದರು.

Comments

Leave a Reply

Your email address will not be published. Required fields are marked *