ಬೆಳಗಾವಿ: ಜೂನ್ 1ರಂದು ವ್ಯಕ್ತಿಯೊಬ್ಬರು ಅಪರಿಚಿತ ವಾಹನ ಡಿಕ್ಕಿಯಾಗಿ ಮೃತಪಟ್ಟಿದ್ದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಉಮರಾಣಿ ಹೊರವಲಯದಲ್ಲಿ ನಡೆದಿತ್ತು.
ಆದರೆ ಈಗ ಅದು ಕೇವಲ ಆಕ್ಸಿಡೆಂಟ್ ಅಲ್ಲ ಬದಲಾಗಿ ಉದ್ದೇಶಪೂರ್ವಕವಾಗಿ ಕೊಲೆ ಮಾಡಲಾಗಿದೆ ಎಂದು ಗ್ರಾಮಸ್ಥರ ಶಂಕಿಸಿದ್ದಾರೆ. ಗ್ರಾಮಸ್ಥರ ಶಂಕೆಯನ್ನು ಬೆನ್ನು ಬಿದ್ದ ಪೊಲೀಸರು ಗುರುವಾರ ತಡರಾತ್ರಿ ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜೂನ್ 1ರಂದು ಉಮಾರಾಣಿ ಹೊರವಲಯದ ರಾಜ್ಯ ಹೆದ್ದಾರಿ 18ರಲ್ಲಿ ನಿವೃತ್ತ ಸೈನಿಕ ಪ್ರಕಾಶ್ ಶಂಕರ್ ಈಟಿಗೆ ಅಪಘಾತವಾಗಿತ್ತು. ಅಪಘಾತವಾಗಿದೆ ನಮಗೆ ನ್ಯಾಯ ಕೊಡಿಸಿ ಎಂದು ಮೃತನ ಪತ್ನಿ ಶ್ರೀದೇವಿ ಈಟಿ ಚಿಕ್ಕೋಡಿ ಸಂಚಾರಿ ಪೊಲೀಸ್ ಠಾಣೆಗೆ ದೂರನ್ನು ಸಹ ನೀಡಿದ್ದಳು. ದೂರು ದಾಖಲಿಸಿಕೊಂಡಿದ್ದ ಪೊಲೀಸರು ಆಕ್ಸಿಡೆಂಟ್ ಮಾಡಿದ ವಾಹನಕ್ಕಾಗಿ ಹುಡುಕಾಟ ನಡೆಸಿದ್ದರು.

ಈ ವೇಳೆ ಸ್ಥಳೀಯರು ನೀಡಿದ ಮಾಹಿತಿ ಅನ್ವಯಿಸಿ ತನಿಖೆಯ ದಿಕ್ಕು ಬದಲಿಸಿದ ಪೊಲೀಸರು ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಂತೋಷ್ ಕಮತೆ, ಮಹೇಶ್ ಮತ್ತು ಬರಮು ಸೇರಿದಂತೆ ಮೃತ ಪ್ರಕಾಶ್ ಪತ್ನಿ ಶ್ರೀದೇವಿಯನ್ನು ಸಹ ಪೊಲೀಸರು ಬಂಧಿಸಿದ್ದಾರೆ.

ಸಂತೋಷ್ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಪ್ರಕಾಶ್ ಪತ್ನಿ ಶ್ರೀದೇವಿಯೇ ಈ ಕೊಲೆಯ ಮಾಸ್ಟರ್ ಮೈಂಡ್ ಎಂದು ಹೇಳಲಾಗುತ್ತಿದ್ದು, ಕೊಲೆಗೆ ತಾನೇ ಸುಪಾರಿ ಕೊಟ್ಟು ಆಕ್ಸಿಡೆಂಟ್ ನಾಟಕವಾಡಿದ್ದು ಬಯಲಾಗಿದೆ. ಅಲ್ಲದೆ ಕೊಲೆ ನಡೆದ ದಿನ ಪ್ರಕಾಶ್ ಅವರನ್ನ ಕ್ರೂಸರ್ ವಾಹನವೊಂದು ಪದೇ ಪದೇ ಹಿಂಬಾಲಿಸುತ್ತಿದ್ದ ದೃಶ್ಯ ಸ್ಥಳೀಯ ಪೆಟ್ರೋಲ್ ಬಂಕ್‍ವೊಂದರ ಸಿಸಿಟಿವಿಗಳಲ್ಲಿ ರೆಕಾರ್ಡ್ ಆಗಿದೆ.
ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಎಂಬ ಕಾರಣಕ್ಕೆ ಕಟ್ಟಿಕೊಂಡ ಪತಿಯನ್ನೇ ಕೊಲೆ ಮಾಡಿಸಿದ ಶ್ರೀದೇವಿ ಮತ್ತು ಆತಳ ಸಹಚರರು ಸದ್ಯ ಪೊಲೀಸರ ಅತಿಥಿಯಾಗಿದ್ದಾರೆ. ಆದರೆ ಸುಂದರ ಭವಿಷ್ಯದ ಕನಸು ಕಂಡಿದ್ದ ದಂಪತಿಗಳಿಗಿದ್ದ ಒಂದೇ ಒಂದು ಹೆಣ್ಣು ಮಗು ಈಗ ಅನಾಥವಾಗಿದೆ.


Leave a Reply