ಪತಿಯ ಜೀವ ಉಳಿಸಲು ಹೋಗಿ ಪ್ರಾಣ ಬಿಟ್ಟ ಪತ್ನಿ

ನವದೆಹಲಿ: ವಿವಾಹ ಸಮಾರಂಭವೊಂದರಲ್ಲಿ ಡಿಜೆ ಮ್ಯೂಸಿಕ್ ಗಲಾಟೆಯಿಂದಾಗಿ ಪತಿಯ ಜೀವವನ್ನು ಉಳಿಸಲು ಹೋಗಿ ಗುಂಡೇಟು ತಿಂದು ಪತ್ನಿ ಮೃತಪಟ್ಟಿರುವ ಘಟನೆ ದೆಹಲಿಯ ಮಂಗೊಲ್ಪುರಿ ಪ್ರದೇಶದಲ್ಲಿ ನಡೆದಿದೆ.

ಸುನಿತಾ ರಾಣಿ ಮೃತ ದುರ್ದೈವಿ. ಈ ಘಟನೆ ಶುಕ್ರವಾರ ಮತ್ತು ಶನಿವಾರ ಮಧ್ಯರಾತ್ರಿ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜೆ ಸಂದೀಪ್ ಮತ್ತು ಆತನ ಸಹೋದರ ಆಕಾಶ್ ಇಬ್ಬರು ಆರೋಪಿಗಳನ್ನು ಶನಿವಾರ ಚಂಡೀಗಢದಿಂದ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಏನಿದು ಪ್ರಕರಣ?
ಸುನಿತಾ ರಾಣಿ ಮತ್ತು ಸಾಜನ್ ರಹಿ ಮದುವೆಯಾಗಿದ್ದು, ಅವರಿಗೆ ನಾಲ್ಕು ಮಕ್ಕಳಿದ್ದಾರೆ. ಸುನಿತಾ ಸಂಬಂಧಿಯ ಮದುವೆಗೆಂದು ಮಂಗೊಲ್ಪುರಿಯಲ್ಲಿ ರಾಮಲೀಲಾ ಮೈದಾನಕ್ಕೆ ಹೋಗಿದ್ದರು. ಮದುವೆ ಸಂದರ್ಭದಲ್ಲಿ ಸುನಿತಾ ಪತಿ ಸಾಜನ್ ಅವರು ಡಿಜೆ ಸಂದೀಪ್ ಜೊತೆ ಮ್ಯೂಸಿಕ್‍ಗೆ ಸಂಬಂಧಿಸಿದಂತೆ ಜಗಳವಾಡಿದ್ದಾರೆ.

ಸ್ವಲ್ಪ ಸಮಯದ ನಂತರ ಸಂದೀಪ್ ಮತ್ತು ಸಹೋದರ ಆಕಾಶ್ ಇಬ್ಬರು ಸುನಿತಾ ಮತ್ತು ಸಾಜನ್ ಊಟ ಮಾಡುತ್ತಿದ್ದ ಟೇಬಲ್ ಬಳಿ ಬಂದು ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಈ ಮಧ್ಯೆ ಒಬ್ಬ ಗನ್ ತೆಗೆದುಕೊಂಡು ಅದನ್ನು ಸಾಜನ್‍ಗೆ ಗುರಿಯಿಟ್ಟಿದ್ದಾನೆ. ಅಷ್ಟರಲ್ಲಿ ಸುನಿತಾ ಮಧ್ಯಪ್ರವೇಶಿಸಿದ್ದಾಳೆ. ಇದರಿಂದಾಗಿ ಪತಿಗೆ ಬೀಳುವ ಗುಂಡು ಸುನಿತಾಗೆ ಬಿದ್ದಿದೆ ಎಂದು ಸುನೀತಾ ಸಹೋದರ ವಿಷ್ಣು ಕುಮಾರ್ ಹೇಳಿದ್ದಾರೆ.

ತಕ್ಷಣ ಸುನಿತಾರನ್ನು ಜೈಪುರ ಗೋಲ್ಡನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸುನಿತಾ ಮೃತಪಟ್ಟಿದ್ದಾರೆ. ದಂಪತಿ ಶಾಹದಾರಾ ನಿವಾಸಿಗಳಾಗಿದ್ದು, ಮೃತ ಸುನಿತಾ ಗೃಹಿಣಿಯಾಗಿದ್ದಾರೆ. ಸಾಜನ್ ಆಸ್ತಿಯ ಮಾರಾಟಗಾರರಾಗಿ ಕೆಲಸ ಮಾಡುತ್ತಿದ್ದರು ಎಂದು ಡಿಸಿಪಿ ಸೆಜು ಪಿ ಕರುವಿಲ್ಲಾ ತಿಳಿಸಿದ್ದಾರೆ.

ಸದ್ಯಕ್ಕೆ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳಿಬ್ಬರು ಕಳ್ಳತನದ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಅನೇಕ ಬಾರಿ ಅವರನ್ನು ಬಂಧಿಸಲು ಹೋದಾಗ ಪರಾರಿಯಾಗುತ್ತಿದ್ದರು. ಅವರಿಗಾಗಿ ತಂಡಗಳನ್ನು ಕೂಡ ರಚಿಸಲಾಗಿತ್ತು. ಈಗ ಚಂಡೀಗಢದಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *