ಪ್ರಿಯಕರನೊಂದಿಗೆ ಎಸ್ಕೇಪ್ ಆಗಲು ಪತಿಯನ್ನೇ ಹತ್ಯೆಗೈದ 2 ಮಕ್ಕಳ ತಾಯಿ

– ಮಕ್ಕಳಿಂದ ತಾಯಿ ಕೃತ್ಯ ಬಯಲು

ಚಂಡೀಗಢ: ಮಹಿಳೆಯೊಬ್ಬಳು ತಾನು ಅನೈತಿಕ ಸಂಬಂಧ ಹೊಂದಿದ್ದ ಪ್ರಿಯಕರನೊಂದಿಗೆ ಪರಾರಿಯಾಗಲು ಪತಿಯನ್ನೇ ಹತ್ಯೆ ಮಾಡಿರುವ ಘಟನೆ ಪಂಜಾಬಿನ ತರನ್ ತರನ್ ಜಿಲ್ಲೆಯಲ್ಲಿ ನಡೆದಿದೆ.

ರಾಜ್‍ಪ್ರೀತ್ ಸಿಂಗ್ ಕೊಲೆಯಾದ ಪತಿ. ಆರೋಪಿ ಪತ್ನಿ ಸಿಮ್ರಾನ್ ಕೌರ್ ಮೊದಲಿಗೆ ಪತಿಯ ಊಟದಲ್ಲಿ ವಿಷ ಬೆರೆಸಿ ತಿನ್ನಿಸಿದ್ದಾಳೆ. ಪತಿ ವಿಷದಿಂದ ಸಾಯುವುದು ಅನುಮಾನ ಎಂದು ತಿಳಿದು ಭಯದಿಂದ ತಾನೇ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಏನಿದು ಪ್ರಕರಣ?
ಸಿಮ್ರಾನ್ ಮತ್ತು ಮೃತ ರಾಜ್‍ಪ್ರೀತ್ ಸಿಂಗ್ 12 ವರ್ಷಗಳ ಹಿಂದೆ ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದರೆ ಆರೋಪಿ ಸಿಮ್ರಾನ್ ಲವ್‍ಪ್ರೀತ್ ಸಿಂಗ್ ಲವ್ಲಿ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಈ ಬಗ್ಗೆ ತಿಳಿದ ಸಿಮ್ರಾನ್ ಕುಟುಂಬವು ಇಬ್ಬರ ಸಂಬಂಧವನ್ನು ತಡೆಯಲು ಪ್ರಯತ್ನಿಸಿದ್ದರು. ಸಿಮ್ರಾನ್‍ಗೆ ಮಕ್ಕಳ ಭವಿಷ್ಯದ ಬಗ್ಗೆ ಅರ್ಥಮಾಡಿಸಲು ಯತ್ನಿಸಿದ್ದಾರೆ. ಆದರೂ ಸಿಮ್ರಾನ್ ಆತನೊಂದಿಗೆ ತನ್ನ ಸಂಬಂಧವನ್ನು ಮುಂದುವರಿಸಿದ್ದಳು.

ಕೊಲೆ:
ಕೊನೆಗೆ ಸಿಮ್ರಾನ್ ಪ್ರಿಯಕರನೊಂದಿಗೆ ಓಡಿ ಹೋಗಲು ನಿರ್ಧರಿಸಿದ್ದು, ಇದಕ್ಕೆ ಅಡ್ಡಿಯಾಗುವ ಪತಿಯನ್ನೇ ಕೊಲೆ ಮಾಡಲು ಪ್ಲ್ಯಾನ್ ಮಾಡಿದ್ದಳು. ಅದರಂತೆಯೇ ಪತಿ ರಾಜ್‍ಪ್ರೀತ್ ಮಾಡುವ ಊಟದಲ್ಲಿ ವಿಷ ಬೆರೆಸಿದ್ದಳು. ಅದನ್ನು ಪತಿ ತಿಂದಿದ್ದಾನೆ. ಆದರೂ ಆತ ಸಾಯುವುದಿಲ್ಲ ಎಂಬ ಭಯದಿಂದ ಪತಿಯನ್ನೇ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ನಂತರ ಅವಳು ಪ್ರೇಮಿಯೊಂದಿಗೆ ಓಡಿಹೋಗುವ ಮೊದಲು ಮಕ್ಕಳನ್ನು ತನ್ನ ತಂದೆಯ ಮನೆಯಲ್ಲಿ ಬಿಟ್ಟು ಹೋಗಿದ್ದಾಳೆ.

ಇತ್ತ ಮಕ್ಕಳು ತಾಯಿ ಸಿಮ್ರಾನ್ ತಂದೆಯನ್ನು ಹಗ್ಗದಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ ಎಂದು ತಮ್ಮ ಅಜ್ಜನಿಗೆ ಹೇಳಿದ್ದಾರೆ. ಆಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೇ ಆಕೆಯ ಮಕ್ಕಳು ತಮ್ಮ ತಾಯಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಆಕೆಯನ್ನು ಗಲ್ಲಿಗೇರಿಸಬೇಕೆಂದು ಆಗ್ರಹಿಸಿದ್ದಾರೆ.

ಮಾಹಿತಿ ತಿಳಿದು ರಾಜ್‍ಪ್ರೀತ್‍ನ ಮನೆಗೆ ಹೋದಾಗ ಆತನ ಸ್ಥಿತಿ ಗಂಭೀರವಾಗಿತ್ತು. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ರಾಜ್‍ಪ್ರೀತಿ ಮೃತಪಟ್ಟಿದ್ದಾನೆ. ಮೃತ ತಂದೆ ಸಿಮ್ರಾನ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಆ ದೂರಿನ ಮೇರೆಗೆ ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿಗಳಾದ ಸಿಮ್ರಾನ್ ಮತ್ತು ಲವ್ಲಿಯನ್ನು ಬಂಧಿಸಲು ಶೋಧಕಾರ್ಯ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *