ವಿಚ್ಛೇದನ ನಂತ್ರ ಮತ್ತೆ ಬಾಳೋಣವೆಂದು ಕರ್ಕೋಂಡು ಬಂದ – 15 ದಿನದಲ್ಲೇ ಪತ್ನಿಯ ಕೊಲೆಗೈದ

ಬೆಳಗಾವಿ: ಜಗಳವಾಡಿಕೊಂಡು ಪತಿ-ಪತ್ನಿ ಇಬ್ಬರು ವಿಚ್ಛೇದನ ಪಡೆದುಕೊಂಡಿದ್ದು, ಮತ್ತೆ ಒಂದಾಗಿ ಸಂಸಾರ ನಡೆಸುತ್ತೇವೆ ಎಂದು ಕರೆದುಕೊಂಡು ಬಂದ ಪತಿ 15 ದಿನದಲ್ಲಿ ಹೆಂಡತಿಯನ್ನ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ನಗರದ ಪೀರನವಾಡಿಯಲ್ಲಿ ನಡೆದಿದೆ.

ಶಿಲ್ಪಾ ಹಂಚಿನಮನಿ ಕೊಲೆಯಾದ ಮಹಿಳೆ. ಈಕೆ 10 ವರ್ಷದ ಹಿಂದೆ ಶಾಲೆಯಲ್ಲಿ ಪಿಯಾನ್ ಆಗಿದ್ದ ಭರತ ಹಂಚಿನಮನಿಯನ್ನು ಮದುವೆಯಾಗಿದ್ದಳು. ವಿವಾಹವಾದ ಆರಂಭದಲ್ಲಿ ಪತಿ-ಪತ್ನಿ ಇಬ್ಬರು ಅನ್ಯೋನ್ಯವಾಗಿದ್ದರು. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಆದರೆ ಎರಡೂ ಹೆಣ್ಣು ಮಕ್ಕಳು ಆಯಿತು ಎಂದು ಪ್ರತಿದಿನವೂ ಪತ್ನಿ ಶಿಲ್ಪಾ ಜೊತೆ ಜಗಳ ಮಾಡುತ್ತಿದ್ದನು. ಹೀಗೆ ಜಗಳ ವಿಕೋಪಕ್ಕೆ ಹೋಗಿ ಮೂರು ವರ್ಷಗಳ ಹಿಂದೆ ಈ ಕೇಸ್ ಕೋರ್ಟ್ ಮೆಟ್ಟಿಲೇರಿ ನಂತರ ಇಬ್ಬರು ವಿಚ್ಛೇದನ ಪಡೆದುಕೊಂಡಿದ್ದರು.

ಇದಾದ ಬಳಿಕ ಹೆಂಡತಿ ಮಕ್ಕಳ ಜೀವನಕ್ಕೆ ತಿಂಗಳಿಗೆ 10 ಸಾವಿರ ಜೀವನಾಂಶವನ್ನು ಪತಿ ಕೊಡುವಂತೆ ಕೋರ್ಟ್ ಆದೇಶ ನೀಡಿತ್ತು. ಮೊದ ಮೊದಲು ಹಣ ಕೊಟ್ಟ ಭರತ, ಕ್ರಮೇಣ ಹಣ ಕೊಡುವುದನ್ನ ನಿಲ್ಲಿಸಿದ್ದನು. ಇದಾದ ಬಳಿಕ ಕಳೆದ 15 ದಿನಗಳ ಹಿಂದೆ ನನ್ನ ಮಗಳ ಮನೆಗೆ ಬಂದು ನನ್ನಿಂದ ತಪ್ಪಾಯಿತು. ಮನೆಗೆ ಬಾ ಎಂದು ಹೆಂಡತಿ ಮಕ್ಕಳ ಮನವೊಲಿಸಿ ಕರೆದುಕೊಂಡು ಹೋಗಿದ್ದನು. ಆದರೆ ಕೆಲವು ದಿನಗಳಿಂದ ಮಗಳ ಶೀಲದ ಮೇಲೆ ಅನುಮಾನ ಪಟ್ಟು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾನೆ ಎಂದು ಮೃತಳ ತಾಯಿ ಯಲ್ಲವ್ವಾ ತಿಳಿಸಿದ್ದಾರೆ.

ಕೊಲೆ ಮಾಡಿದ ಪಾಪಿ ಪತಿ ನಂತರ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಗೆ ಬಂದು ತಾನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿಯನ್ನ ಕರೆದುಕೊಂಡು ಸ್ಥಳಕ್ಕೆ ಹೋದ ಪೊಲೀಸರು ಪರಿಶೀಲನೆ ನಡೆಸಿ ಕೇಸ್ ದಾಖಲಿಸಿಕೊಂಡು ಭರತನನ್ನು ವಿಚಾರಣೆಗೊಳಪಡಿಸಿದ್ದರು.

ಪತ್ನಿ ಮನೆಗೆ ಬಂದ ಮೇಲೆ ಬೇರೊಬ್ಬರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ಅವಳಿಗೆ ಬುದ್ಧಿ ಹೇಳಿದರೂ ಕೇಳಲಿಲ್ಲ. ಹೀಗಾಗಿ ನಾನೇ ಕೊಚ್ಚಿ ಕೊಂದೆ ಎಂದು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿರುವುದಾಗಿ ನಗರ ಪೊಲೀಸ್ ಆಯುಕ್ತ ಲೋಕೇಶ್ ಕುಮಾರ್ ತಿಳಿಸಿದ್ದಾರೆ. ಸದ್ಯಕ್ಕೆ ಪತಿಯ ಹೇಳಿಕೆ ಮೇಲೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Comments

Leave a Reply

Your email address will not be published. Required fields are marked *