ಭೋಪಾಲ್: ಪತ್ನಿಗೆ ತನ್ನ ಗಂಡನಿಗೆ ಸಂಬಳ ಎಷ್ಟಿದೆ ಎನ್ನುವುದನ್ನು ತಿಳಿದುಕೊಳ್ಳುವ ಹಕ್ಕಿದೆ ಎಂದು ಮಧ್ಯಪ್ರದೇಶ ಹೈಕೋರ್ಟ್ ತೀರ್ಪು ನೀಡಿದೆ.
ಪತಿಯಿಂದ ದೂರವಾಗಿರುವ ಪತ್ನಿ ಗಂಡನ ಸಂಬಳದ ಮಾಹಿತಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ಜಿಲ್ಲಾ ನ್ಯಾಯಾಲಯ ಮತ್ತು ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ರದ್ದಾಗಿತ್ತು. ಈಗ ಹೈಕೋರ್ಟ್ ದ್ವಿಸದಸ್ಯ ಪೀಠ ಈ ಆದೇಶವನ್ನು ರದ್ದುಗೊಳಿಸಿ ಪತ್ನಿ ಪರವಾಗಿ ತೀರ್ಪು ಪ್ರಕಟಿಸಿದೆ.
ಏನಿದು ಪ್ರಕರಣ?
ಬಿಎಸ್‍ಎನ್‍ಎಲ್ ಉದ್ಯೋಗಿ ಪವನ್ ಜೈನ್ ನಿಂದ ಬೇರೆಯಾದ ಸುನಿತಾ ಜೈನ್ ಕುಟುಂಬ ನಿರ್ವಹಣೆಗೆ 7 ಸಾವಿರ ರೂ. ನಿರ್ವಹಣಾ ಭತ್ಯೆಯನ್ನು ಪಡೆಯುತ್ತಿದ್ದರು. ಪತಿಯ ಸಂಬಳ ತಿಂಗಳಿಗೆ 2 ಲಕ್ಷ ರೂ. ಇರುವ ಕಾರಣ ತನಗೆ ಇನ್ನು ಹೆಚ್ಚು ನಿರ್ವಹಣಾ ಭತ್ಯೆ ಸಿಗಬೇಕು ಎಂದು ಜಿಲ್ಲಾ ನ್ಯಾಯಾಲಯದಲ್ಲಿ ಪತಿಯ ಸಂಬಳದ ಮಾಹಿತಿಯನ್ನು ಕೋರಿ ಅರ್ಜಿಯನ್ನು ಸಲ್ಲಿಸಿದರು.
ಈ ಅರ್ಜಿಯನ್ನು ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಮಾಹಿತಿ ಹಕ್ಕಿನ ಅಡಿಯಲ್ಲಿ ಬಿಎಸ್‍ಎನ್‍ಎಲ್ ಸಂಸ್ಥೆಗೆ ಮಾಹಿತಿ ಕೋರಿ ಅರ್ಜಿ ಕೇಳಿದ್ದರು. ಮಾಹಿತಿ ಕೊಡಲು ಬಿಎಸ್‍ಎನ್‍ಎಲ್ ಸಂಸ್ಥೆ ನಿರಾಕರಿಸಿತು. ನಂತರ ಪತ್ನಿ ಕೇಂದ್ರ ಮಾಹಿತಿ ಆಯೋಗಕ್ಕೆ ದೂರು ನೀಡಿದರು. ಸುನಿತಾ ಜೈನ್ ಅರ್ಜಿಯನ್ನು ಪುರಸ್ಕರಿಸಿದ ಕೇಂದ್ರ ಮಾಹಿತಿ ಆಯೋಗ ಸಂಬಳದ ಮಾಹಿತಿಯನ್ನು ನೀಡುವಂತೆ ಬಿಎಸ್‍ಎನ್‍ಎಲ್ ಗೆ ಆದೇಶವನ್ನು ನೀಡಿತ್ತು. ಆಯೋಗದ ಆದೇಶವನ್ನು ಪ್ರಶ್ನಿಸಿ ಪವನ್ ಹೈ ಕೋರ್ಟ್‍ನಲ್ಲಿ ಪ್ರಶ್ನಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಏಕ ಸದಸ್ಯ ಪೀಠ ಆಯೋಗದ ಆದೇಶವನ್ನು ರದ್ದು ಮಾಡಿತ್ತು.
ಏಕಸದಸ್ಯ ಪೀಠದ ಆದೇಶವನ್ನು ಪತ್ನಿ ದ್ವಿಸದ್ಯ ಪೀಠದಲ್ಲಿ ಪ್ರಶ್ನಿಸಿದರು. ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಸ್ ಕೆ ಸೇಥ್ ಹಾಗೂ ನಂದಿತಾ ದುಬೆ ಅವರನ್ನು ಒಳಗೊಂಡ ದ್ವಿ ಸದಸ್ಯ ಪೀಠ ಪತಿ ಸಂಬಳದ ಮಾಹಿತಿಯನ್ನು ಪತ್ನಿಗೆ ತಿಳಿಯುವ ಹಕ್ಕಿದೆ ಎಂದು ಹೇಳಿ ಏಕಸದಸ್ಯ ಪೀಠದ ಆದೇಶವನ್ನು ರದ್ದುಗೊಳಿಸಿದರು.

Leave a Reply