ತಿಂಡಿಯಲ್ಲಿ ಕೂದಲು ಸಿಕ್ಕಿದ್ದಕ್ಕೆ ರೊಚ್ಚಿಗೆದ್ದು ಪತ್ನಿಯ ತಲೆಯನ್ನೇ ಬೋಳಿಸಿದ

ಢಾಕಾ: ಉಪಹಾರದಲ್ಲಿ ಕೂದಲು ಬಂದಿದ್ದಕ್ಕೆ ಸಿಟ್ಟಿಗೆದ್ದು ಬಲವಂತವಾಗಿ ಪತ್ನಿ ತಲೆ ಬೋಳಿಸಿದ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ.

ಬೆಳಗ್ಗೆ ತಿಂಡಿ ಸೇವಿಸುತ್ತಿದ್ದಾಗ ಹೆಂಡತಿಯ ಕೂದಲು ತಟ್ಟೆಯಲ್ಲಿ ಬಿದ್ದಿದ್ದಕ್ಕೆ ಸಿಟ್ಟಿಗೆದ್ದು ಬಲವಂತವಾಗಿ ತಲೆಯ ಕೂದಲನ್ನು ಬೋಳಿಸಿದ್ದಾನೆ. ಘಟನೆ ಕುರಿತು ಮಾಹಿತಿ ತಿಳಿದ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದು, ಸಂಪ್ರದಾಯವಾದಿ ಮುಸ್ಲಿಂ ರಾಷ್ಟ್ರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚುತ್ತಿವೆ ಎಂದು ಹಕ್ಕುಗಳ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಬಾಂಗ್ಲಾದೇಶದ ಜಾಯ್‍ಪುರ್‍ನ ವಾಯವ್ಯ ಜಿಲ್ಲೆಯ ಹಳ್ಳಿಯೊಂದರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಘಟನೆಯ ಬಗ್ಗೆ ಗ್ರಾಮಸ್ಥರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, 35 ವರ್ಷದ ಬಾಬ್ಲು ಮೊಂಡಾಲ್‍ನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ತನ್ನ ಪತ್ನಿ ಸಿದ್ಧಪಡಿಸಿದ ಅಕ್ಕಿ ಹಾಗೂ ಹಾಲಿನ ಉಪಹಾರವನ್ನು ಸೇವಿಸುತ್ತಿರುವಾಗ ತಟ್ಟೆಯಲ್ಲಿ ಕೂದಲು ಪತ್ತೆಯಾಗಿದೆ. ಕೂದಲನ್ನು ನೋಡುತ್ತಲೇ ಬಾಬ್ಲು ಕೋಪಗೊಂಡು ಹೆಂಡತಿಯನ್ನು ದೂಷಿಸಿದ್ದಾನೆ. ನಂತರ ಬ್ಲೇಡ್ ತೆಗೆದುಕೊಂಡು ಬಲವಂತವಾಗಿ ಹೆಂಡತಿಯ ತಲೆಯನ್ನು ಬೋಳಿಸಿದ್ದಾನೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ಬಬ್ಲು ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿರುವ ಪೊಲೀಸರು, ಇದರಿಂದ ಆತನ ಹೆಂಡತಿಗೆ ಘೋರ ನೋವುಂಟಾಗಿದ್ದು, ಗರಿಷ್ಠ 14 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸುವ ಅಪರಾಧವಾಗಿದೆ. ಅಲ್ಲದೆ ತನ್ನ 23 ವರ್ಷದ ಹೆಂಡತಿಯ ವಿಧೇಯತೆಯನ್ನು ದುರುಪಯೋಗಪಡಿಸಿಕೊಂಡಿದ್ದಾನೆ ಎಂದು ವಿವರಿಸಿದ್ದಾರೆ.

ಸರ್ಕಾರೇತರ ಸಂಸ್ಥೆಯೊಂದರ ಪ್ರಕಾರ, ವರ್ಷದ ಮೊದಲ ಆರು ತಿಂಗಳಲ್ಲಿ ದಿನಕ್ಕೆ ಸರಾಸರಿ ಮೂರು ಅತ್ಯಾಚಾರಗಳು ಬಾಂಗ್ಲಾದೇಶದಲ್ಲಿ ನಡೆದಿವೆ. ಜನವರಿ-ಜೂನ್ ನಡುವೆ ಒಟ್ಟು 630 ಮಹಿಳೆಯರ ಮೇಲೆ ಅತ್ಯಾಚಾರ ನಡೆದಿದ್ದು, ಹಲ್ಲೆಯಿಂದಾಗಿ 37 ಮಂದಿ ಸಾವನ್ನಪ್ಪಿದ್ದರೆ, 7 ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದೆ.

Comments

Leave a Reply

Your email address will not be published. Required fields are marked *