ಕೋಲಾರ: ವಿಚ್ಛೇದನಕ್ಕೂ ಮೊದಲೇ ಗಂಡ ಮತ್ತೊಂದು ಮದುವೆಯಾಗಿದ್ದು, ಈ ಮದುವೆಯ ಆರತಕ್ಷತೆಗೆ ಬಂದ ಮೊದಲ ಪತ್ನಿಯಿಂದ ಸಿನಿಮೀಯ ರೀತಿಯಲ್ಲಿ ಕಾರ್ಯಕ್ರಮ ನಿಲ್ಲಿಸಿದ ಪ್ರಸಂಗ ಕೋಲಾರದಲ್ಲಿ ನಡೆದಿದೆ.
ಕೋಲಾರ ನಗರದ ಶಾಂತಿ ಕಲ್ಯಾಣ ಮಂಟಪದಲ್ಲಿ ಈ ಘಟನೆ ನಡೆದಿದ್ದು, ವಿಶ್ವ ಮೋಹನ್ ವಿಚ್ಛೇದನಕ್ಕೂ ಮೊದಲೇ ಎರಡನೇ ಮದುವೆಯಾಗುತ್ತಿದ್ದನು. ಈ ವಿಚಾರ ಮೊದಲ ಪತ್ನಿಗೆ ತಿಳಿದು ಎಂಟ್ರಿ ಕೊಡುತ್ತಿದ್ದಂತೆಯೇ ಮದುವೆ ಮನೆ ಸ್ತಬ್ಧವಾಗಿದೆ. ಅಲ್ಲದೆ ಪತಿ ಸೇರಿದಂತೆ ನೂತನ ವಧು, ಸಂಬಂಧಿಕರು ಕಕ್ಕಾಬಿಕ್ಕಿಯಾಗಿದ್ದಾರೆ.

ಮೊದಲ ಪತ್ನಿ ಸಂಧ್ಯಾ ಹಾಗೂ ವಿಶ್ವ ಮೋಹನ್‍ಗೆ 2015 ರಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿತ್ತು. ಆದರೆ ಇಂದು ರಕ್ಷಿತಾ (ಹೆಸರು ಬದಲಾಯಿಸಲಾಗಿದೆ) ಎಂಬ ಯುವತಿಯೊಂದಿಗೆ ವಿಶ್ವಮೋಹನ್ ನ ಎರಡನೆ ಮದುವೆಯ ಆರತಕ್ಷತೆ ನಡೆಯುತಿತ್ತು. ಪತಿಯ ಎರಡನೇ ಮದುವೆಯ ಬಗ್ಗೆ ತಿಳಿದು ಆರತಕ್ಷತೆಗೆ ಬಂದ ಸಂಧ್ಯಾ ಗಲಾಟೆ ಮಾಡಿದ್ದಾರೆ.
ಮತ್ತೊಂದು ಮದುವೆಯಾಗದಂತೆ ಕೋರ್ಟ್ ಆದೇಶ ಪ್ರತಿ ಹಿಡಿದು ಆರತಕ್ಷತೆಗೆ ಬಂದ ಮೊದಲ ಪತ್ನಿ, ಕೆಲಕಾಲ ವಾಗ್ವಾದ ನಡೆಸಿ ನಂತರ ಆರತಕ್ಷತೆ ವೇದಿಕೆಯಲ್ಲಿ ಸಂಧ್ಯಾ ಹಾಗೂ ಪೋಷಕರು ಧರಣಿ ಕುಳಿತರು. ಕೊನೆಗೆ ಸಂಧ್ಯಾಳ ಹೈಡ್ರಾಮಾದಿಂದ ಬೇಸತ್ತ ನೂತನ ವಧುವಿನ ಕಡೆಯವರು ಆಕೆಯನ್ನು ಕಲ್ಯಾಣ ಮಂಟಪದಿಂದ ಹೊರ ಕಳುಹಿಸಿದ್ದಾರೆ.

ಮದುವೆ ಮನೆಯಲ್ಲಿ ಮೊದಲ ಹೆಂಡತಿಯಿಂದ ಗಲಾಟೆ ವಿಚಾರವಾಗಿ ಮದುವೆ ಮನೆಯವರಿಂದ ಮಾಧ್ಯಮದವರ ಮೇಲೆ ಹಲ್ಲೆ ನಡೆದಿದೆ. ಸುಮಾರು 50 ಕ್ಕೂ ಹೆಚ್ಚು ಜನರ ಗುಂಪು ಬಂದು ಸುದ್ದಿ ಮಾಡದಂತೆ ಗಲಾಟೆ ಮಾಡಿ ಮೂವರು ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ಗೈದಿದ್ದಾರೆ.
ಈ ಘಟನೆ ಕೋಲಾರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply