ಎರಡನೇ ಮದುವೆಗೆ ಮುಂದಾದ ಉಪನ್ಯಾಸಕನಿಗೆ ಕಾಲೇಜಿನಲ್ಲೇ ಪತ್ನಿಯಿಂದ ಗೂಸಾ

ಕೋಲಾರ: ವಿಚ್ಚೇಧನಕ್ಕೂ ಮುನ್ನವೇ ಮತ್ತೊಂದು ಮದುವೆಗೆ ಮುಂದಾಗಿರುವ ರಸಾಯನ ಶಾಸ್ತ್ರ ಉಪನ್ಯಾಸಕನಾಗಿದ್ದ ಪತಿಗೆ ಪತ್ನಿ ಹಾಗೂ ಆಕೆಯ ಸಂಬಂಧಿಕರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಕೋಲಾರದಲ್ಲಿ ನಡೆದಿದೆ.

ಜಿಲ್ಲೆಯ ಬಂಗಾರಪೇಟೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೆಮಿಸ್ಟ್ರಿ ಉಪನ್ಯಾಸಕನಾಗಿರುವ ಮಂಜುನಾಥ್ ರೆಡ್ಡಿಗೆ ಪತ್ನಿ ಸುಷ್ಮಾ ಗೂಸಾ ಕೊಟ್ಟಿದ್ದಾರೆ. ಕಳೆದ ನಾಲ್ಕು ವರ್ಷಗಳ ಹಿಂದೆ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಹೆಬ್ಬರಿ ಗ್ರಾಮದ ಸುಷ್ಮಾರನ್ನು ಮಂಜುನಾಥ್ ಮದುವೆಯಾಗಿದ್ದನು. ಮಗಳ ಜೀವನ ಚೆನ್ನಾಗಿರಲಿ ಎಂದು ಸುಷ್ಮಾ ಪೋಷಕರು ಕೂಡ ಸಾಲಸೋಲ ಮಾಡಿ ಮದುವೆ ಮಾಡಿಕೊಟ್ಟಿದ್ದರು. ಮಂಜುನಾಥ್ ಅವರ ಪೋಷಕರಿಗೆ ಒಬ್ಬನೆ ಮಗ, ಬದಲಾಗಿ ಸರ್ಕಾರಿ ಉಪನ್ಯಾಸಕ ಕೂಡ ಆಗಿದ್ದಾನೆ. ಆತನ ಜೊತೆ ಮಗಳು ಸುಖವಾಗಿರುತ್ತಾಳೆ ಎಂದು ಲಕ್ಷಾಂತರ ರೂಪಾಯಿ ವರದಕ್ಷಿಣೆ ಕೊಟ್ಟು ಮದುವೆ ಮಾಡಿಕೊಟ್ಟಿದ್ದರು.

ಸುಷ್ಮಾ ಹಳ್ಳಿ ಹುಡುಗಿ, ಪಟ್ಟಣಕ್ಕೆ ಹೊಂದಿಕೊಂಡಿಲ್ಲ ಜೊತೆಗೆ ಕೆಲಸಕ್ಕೆ ಹೋಗಿ ಹಣ ಸಂಪಾದನೆ ಮಾಡಿಲ್ಲ ಎಂದು ನೆಪ ಹೇಳಿ ಮಂಜುನಾಥ್ ವಿಚ್ಚೇಧನಕ್ಕೆ ಅರ್ಜಿ ಸಲ್ಲಿಸಿದ್ದನು. ಆದರೆ ವಿಚ್ಚೇಧನ ಬಗ್ಗೆ ಇತ್ಯರ್ಥವಾಗುವುದಕ್ಕೂ ಮುನ್ನವೇ ಆಸಾಮಿ ವೈದ್ಯೆಯನ್ನು ಮದುವೆಯಾಗಲು ನಿರ್ಧಾರ ಮಾಡಿದ್ದಾನೆ. ಈ ಬಗ್ಗೆ ತಿಳಿದು ಸುಷ್ಮಾ ಹಾಗೂ ಅವರ ಸಂಬಂಧಿಕರು ಮಂಜುನಾಥ್‍ನನ್ನು ಕಾಲೇಜು ಹೊರಗಡೆ ಕರೆತಂದು, ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಈ ವೇಳೆ ಕಾಲೇಜು ಪ್ರಾಂಶುಪಾಲರು ಹಾಗೂ ಸಿಬ್ಬಂದಿ ಮಧ್ಯಪ್ರವೇಶ ಮಾಡಿ ಪರಿಸ್ಥಿತಿ ತಿಳಿಯಾಗಿಸಿದರು. ಈ ಬಗ್ಗೆ ತಿಳಿದ ಬಳಿಕ ಬಂಗಾರಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಜೊತೆಗೆ ಈ ವಿಚಾರದಲ್ಲಿ ಪರ-ವಿರೋಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *