ಪ್ರೇಯಸಿ ಜೊತೆ ತಗ್ಲಾಕ್ಕೊಂಡ ಪತಿಗೆ ರಸ್ತೆಯಲ್ಲೇ ಜುಟ್ಟಿಡಿದು ಬಡಿದ ಪತ್ನಿ, ನಾದಿನಿ

– ನೆಲಕ್ಕೆ ಬೀಳಿಸಿ ಯುವತಿಗೆ ಧರ್ಮದೇಟು
– ತಪ್ಪಿಸಲು ಹೋದ ಪತಿಗೆ ಬಿತ್ತು ಪೊರಕೆ ಏಟು

ಭೋಪಾಲ್: ಪ್ರೇಯಸಿ ಜೊತೆ ಸಿನಿಮಾಗೆ ಹೋಗಿ ಸಿಕ್ಕಿಬಿದ್ದ ಪತಿಗೆ ರಸ್ತೆಯಲ್ಲೇ ಪೊರಕೆಯಿಂದ ಹೊಡೆದು ಪತ್ನಿ, ನಾದಿನಿ ಗ್ರಹಚಾರ ಬಿಡಿಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಭಾನುವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಪತ್ನಿ ಹಾಗೂ ಆಕೆಯ ತಂಗಿ ನಡುರಸ್ತೆಯಲ್ಲೇ ಪತಿ ಹಾಗೂ ಯುವತಿಗೆ ಪೊರಕೆ ಏಟು ಕೊಟ್ಟ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಲವರ್ ಜೊತೆ ಆರಾಮಾಗಿ ಸಿನಿಮಾ ನೋಡಲು ಪತಿ ಇಂದೋರ್‌ನ ಖಜ್ರಾನ ಪೊಲೀಸ್ ಠಾಣೆ ಬಳಿಯ ವೆಲಾಸಿಟಿ ಚಿತ್ರ ಮಂದಿರಕ್ಕೆ ಹೋಗಿದ್ದ. ಈ ಬಗ್ಗೆ ತಿಳಿದು ಪತ್ನಿ ಹಾಗೂ ಆಕೆಯ ತಂಗಿ ಸ್ಥಳಕ್ಕೆ ಹೋಗಿ ಸಿನಿಮಾ ಮುಗಿಯುವವರೆಗೂ ಚಿತ್ರಮಂದಿರದ ಹೊರಗೆ ಪತಿಯನ್ನು ರೆಡ್ ಹ್ಯಾಡ್ ಆಗಿ ಹಿಡಿಯಲು ಕಾದು ಕುಳಿತ್ತಿದ್ದರು.

ಸಿನಿಮಾ ಮುಗಿದ ಬಳಿಕ ಪತಿ ಜೊತೆ ಮತ್ತೊಂದು ಯುವತಿ ನೋಡಿ ಪತ್ನಿ ಹಾಗೂ ನಾದಿನಿ ಕೆಂಡಾಮಂಡಲವಾಗಿದ್ದು, ನಡುರಸ್ತೆಯಲ್ಲೇ ಯುವತಿ ಕೂದಲು ಹಿಡಿದು ಹಿಗ್ಗಾಮುಗ್ಗಾ ಧರ್ಮದೇಟು ನೀಡಿದ್ದಾರೆ. ನೆಲಕ್ಕೆ ಬೀಳಿಸಿ ಥಳಿಸಿದ್ದಾರೆ. ಈ ವೇಳೆ ಪತಿ ಪ್ರಿಯತಮೆಯನ್ನು ಬಿಡಿಸಲು ಮಧ್ಯೆ ಬಂದಾಗ ಇನ್ನಷ್ಟು ರೊಚ್ಚಿಗೆದ್ದು ಆಕೆ ಜೊತೆ ಪತಿಗೂ ಗೂಸಾ ಕೊಟ್ಟಿದ್ದಾರೆ. ಪೊರಕೆಯಿಂದ ಹೊಡೆದು ಗ್ರಹಚಾರ ಬಿಡಿಸಿದ್ದಾರೆ.

ಈ ವೇಳೆ ಸ್ಥಳೀಯರು ಗಲಾಟೆ ನಿಲ್ಲಿಸಲು ಮಧ್ಯೆ ಬಂದರೂ ಏನು ಪ್ರಯೋಜನವಾಗಿಲ್ಲ. ಬಳಿಕ ಈ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿಸಿದಾಗ ಸ್ಥಳಕ್ಕೆ ಬಂದ ಪೊಲೀಸರು ಗಲಾಟೆ ನಿಲ್ಲಿಸಲು ಹರಸಾಹಸವನ್ನೇ ಪಟ್ಟಿದ್ದಾರೆ. ನಂತರ ಪತ್ನಿ, ನಾದಿನಿ, ಪತಿ ಹಾಗೂ ಆತನ ಲವರ್‌ನನ್ನು ಠಾಣೆಗೆ ಕರೆದೊಯ್ದಿದಾರೆ. ಅಲ್ಲಿ ರಾಜಿ ಮಾಡಿಸಲು ಪ್ರಯತ್ನಿಸಿದರೂ ಪತಿ ವಿರುದ್ಧ ಸಿಡಿದೆದ್ದಿದ್ದ ಪತ್ನಿ ಯಾವುದಕ್ಕೂ ಒಪ್ಪಲಿಲ್ಲ.

ಹೀಗಾಗಿ ಮೋಸ ಮಾಡಿದ ಪತಿ ಹಾಗೂ ಆತನ ಲವರ್ ವಿರುದ್ಧ ಪತ್ನಿ ದೂರು ನೀಡಿದ್ದಾಳೆ. ಸದ್ಯ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಪತಿ ಹಾಗೂ ಆತನ ಪ್ರಿಯತೆಮೆಗೆ ಪತ್ನಿ, ನಾದಿನಿ ಸೇರಿ ಕೊಟ್ಟ ಪೊರಕೆ ಏಟಿನ ದೃಶ್ಯವನ್ನು ಸ್ಥಳದಲ್ಲಿದ್ದವರು ಮೊಬೈಲಿನಲ್ಲಿ ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಬಿಟ್ಟಿದ್ದಾರೆ. ಸದ್ಯ ಎಲ್ಲೆಡೆ ವಿಡಿಯೋ ಸಖತ್ ವೈರಲ್ ಆಗಿದೆ.

Comments

Leave a Reply

Your email address will not be published. Required fields are marked *