ಪತ್ನಿ ಜೊತೆ ಸ್ನೇಹಿತನ ವಾಟ್ಸಾಪ್ ಚಾಟಿಂಗ್ – ಪಕ್ಕದ್ಮನೆ ಗೆಳೆಯನ ಕೊಂದು ಸುಟ್ಟಾಕಿದ್ರು!

ಚಿಕ್ಕಬಳ್ಳಾಪುರ: ಸ್ನೇಹಿತ ತನ್ನ ಹೆಂಡತಿ ಜೊತೆ ವಾಟ್ಸಾಪ್ ಚಾಟಿಂಗ್ ಮಾಡುತ್ತಿದ್ದಾನೆ ಹಾಗೂ ತನ್ನ ಹೆಂಡತಿ ಜೊತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಅನುಮಾನಿಸಿ, ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಕಂಬಾಲಹಳ್ಳಿ ಗ್ರಾಮದ ಬಳಿ ನಡೆದಿದೆ.

ಮುತ್ತುಗದಹಳ್ಳಿಯ ಶಂಕರ (30) ಕೊಲೆಯಾದ ವ್ಯಕ್ತಿ. ಗ್ರಾಮದ ಅಶೋಕ್, ಚಂದ್ರು ಹಾಗೂ ಇತರೆ ಸ್ನೇಹಿತರು ಸೇರಿ ಶಂಕರ್ ನನ್ನು ಕೊಲೆ ಮಾಡಿದ್ದಾರೆ. ಕೊಲೆಯಾದ ಶಂಕರ್ ಹಾಗೂ ಕೊಲೆ ಮಾಡಿರುವ ಅಶೋಕ್ ಅಕ್ಕ ಪಕ್ಕದ ಮನೆಯವರಾಗಿದ್ದರು. ಅಶೋಕ್ ಲಾರಿ ಚಾಲಕನಾಗಿದ್ದರೇ, ಶಂಕರ್ ಕ್ಲೀನರ್ ಆಗಿದ್ದನು.

ಇವರಿಬ್ಬರು ಗ್ರಾಮದ ಹತ್ತಿರದಲ್ಲೇ ಇರುವ ಎಸಿಸಿ ಕಾರ್ಖಾನೆಯಿಂದ ಲಾರಿಗಳ ಮೂಲಕ ಸಿಮೆಂಟ್ ಟ್ರಾನ್ಸ್ ಪೋರ್ಟ್ ಕೆಲಸ ಮಾಡಿಕೊಂಡಿದ್ದರು. ತನ್ನ ಪತ್ನಿ ಪದ್ಮ ಜೊತೆ ಶಂಕರ್ ಚಾಟಿಂಗ್ ಮಾಡುತ್ತಿದ್ದ ಎಂದು ಅನುಮಾನಗೊಂಡಿರುವ ಅಶೋಕ್, ತನ್ನ ಮತ್ತೋರ್ವ ಸ್ನೇಹಿತ ಚಂದ್ರು ಹಾಗೂ ಪ್ರವೀಣ್ ಜೊತೆ ಕೊಲೆ ಮಾಡಲು ಸಹಾಯ ಕೇಳಿದ್ದಾನೆ.

ನಂತರ ಅಶೋಕ್ ಕಾರ್ಖಾನೆ ಕೆಲಸದ ನಿಮಿತ್ತ ಶಂಕರ್ ನನ್ನು ಹೊರಗಡೆ ಕರೆದುಕೊಂಡು ಹೋಗಿದ್ದಾನೆ. ಕಂಬಾಲಹಳ್ಳಿ ಗ್ರಾಮದ ಬಳಿಯ ನೀಲಗಿರಿ ತೋಪಿನಲ್ಲಿ ರಾಡ್, ದೊಣ್ಣೆಗಳಿಂದ ಹಲ್ಲೆ ಮಾಡಿ ಶಂಕರ್ ನನ್ನು ಕೊಲೆ ಮಾಡಿದ್ದಾರೆ. ತದನಂತರ ಕೊಲೆ ಪ್ರಕರಣ ಗೊತ್ತಾಗಬಾರದೆಂದು ಮೃತದೇಹವನ್ನು ಸುಟ್ಟು ಹಾಕಿದ್ದಾರೆ.

ಮರುದಿನ ಊರಲ್ಲಿ ಶಂಕರ ಎಲ್ಲಿ ಹೋದ ಅಂತ ಅವನ ಸಂಬಂಧಿಕರು ಕೇಳಿದಾಗ ಗೊತ್ತಿಲ್ಲ ಎಂದು ಹೇಳಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ ಏನೇ ಮಾಡಿದರೂ ಪೊಲೀಸರಿಗೆ ಸಿಕ್ಕಿ ಹಾಕಿಕೊಳ್ಳುತ್ತೇವೆ ಎಂಬ ಭಯದಿಂದ ಆರೋಪಿಗಳೇ ಪೊಲೀಸರ ಬಳಿ ಬಂದು ಶರಣಾಗಿದ್ದಾರೆ. ಇದನ್ನೂ ಓದಿ: UP Election – ಅಮಿತ್ ಶಾ ಮನೆ-ಮನೆ ಪ್ರಚಾರ

ಮಂಚೇನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆಶೋಕ್ ಪತ್ನಿಯನ್ನು ಸಹ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರು ಅರೆಬರೆ ಸುಟ್ಟಿದ್ದ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ:  ಕಣ್ಮರೆಯಾಗಿದ್ದ ಯುವಕ ಪತ್ತೆ: ಭಾರತೀಯ ಸೇನೆಗೆ ಚೀನಾ ಮಾಹಿತಿ

Comments

Leave a Reply

Your email address will not be published. Required fields are marked *