ಮೊದಲ ಪಂದ್ಯದಲ್ಲೇ ಮುಗ್ಗರಿಸಿದ ಪಾಕ್ – ಕ್ರಿಸ್‍ಗೇಲ್ ವಿಶ್ವದಾಖಲೆ

ನಾಟಿಂಗ್‍ಹ್ಯಾಮ್: ವಿಶ್ವಕಪ್ ಸರಣಿ ಆರಂಭಕ್ಕೂ ಮುನ್ನ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಸೋಲುಂಡಿದ್ದ ಪಾಕಿಸ್ತಾನ ಕ್ರಿಕೆಟ್ ತಂಡ, ವಿಶ್ವಕಪ್‍ನಲ್ಲೂ ಸೋಲಿನ ಮೂಲಕ ಅಭಿಯಾನವನ್ನು ಆರಂಭಿಸಿದೆ. ಪಂದ್ಯದಲ್ಲಿ 105 ರನ್ ಗಳಿಗೆ ಪಾಕ್ ತಂಡವನ್ನು ಕಟ್ಟಿಹಾಕಿದ್ದ ವಿಂಡೀಸ್ 13.4 ಓವರ್ ಗಳಲ್ಲಿ ಗುರಿ ತಲುಪಿ 7 ವಿಕೆಟ್ ಗಳ ಭರ್ಜರಿ ಜಯ ಪಡೆದಿದೆ.

ಮೊದಲು ಬ್ಯಾಟಿಂಗ್ ನಡೆಸಿದ ಪಾಕ್ ತಂಡ ಕೆರೇಬಿಯನ್ ಬೌಲಿಂಗ್ ದಾಳಿಗೆ ಸಿಲುಕಿ 21.4 ಓವರ್ ಗಳಲ್ಲಿ 105 ರನ್ ಗಳಿಸಿ ಸರ್ವಪತನವಾಯಿತು. ಪಾಕ್ ಪರ ಆರಂಭಿಕ ಫಖರ್ ಜಮನ್ ಮತ್ತು ಬಾಬರ್ ಅಜಮ್ ತಲಾ 22 ರನ್ ಕಳಿಸಿದ್ದು ಬಿಟ್ಟರೆ ಅನುಭವಿಗಳಾದ ನಾಯಕ ಸರ್ಫರಾಜ್ ಮತ್ತು ಮೊಹಮ್ಮದ್ ಹಫೀಜ್ ತಂಡಕ್ಕೆ ನೆರವಾಗಲಿಲ್ಲ. ಕೊನೆಯಲ್ಲಿ ಬಂದ ರಿಯಾಜ್ 2 ಸಿಕ್ಸರ್ ಸಿಡಿಸಿ 18 ರನ್‍ಗಳಿಸುವ ಮೂಲಕ ತಂಡದ ಮೊತ್ತವನ್ನು 100ರ ಗಡಿ ದಾಟಿಸಿದರು. ಪಾಕ್ ವಿಶ್ವಕಪ್ ಕ್ರಿಕೆಟ್‍ನಲ್ಲಿ 2ನೇ ಅತಿ ಕಡಿಮೆ ರನ್ ಗಳಿಸಿ ಆಲೌಟ್ ಆಯ್ತು. 1992 ರಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 74 ರನ್ ಗಳಿಗೆ ಅಲೌಟ್ ಆಗಿರುವುದು ಪಾಕ್ ಕನಿಷ್ಠ ರನ್ ಮೊತ್ತವಾಗಿದೆ.

106 ರನ್ ಗಳ ಅಲ್ಪ ರನ್ ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ಕೇವಲ 13.4 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 108 ರನ್ ಗಳಿಸಿ ಟೂರ್ನಿಯಲ್ಲಿ ಮೊದಲ ಗೆಲುವು ಪಡೆಯಿತು. ಪಂದ್ಯದಲ್ಲಿ ವಿಂಡೀಸ್ ಪರ 50 ರನ್ (34 ಎಸೆತ, 2 ಬೌಂಡರಿ, 3 ಸಿಕ್ಸರ್) ಸಿಡಿಸಿದ ಕ್ರಿಸ್ ಗೇಲ್ ಅಂತರಾಷ್ಟ್ರಿಯ ಕ್ರಿಕೆಟಿನಲ್ಲಿ 19 ಸಾವಿರ ರನ್ ಪೂರ್ಣಗೊಳಸಿದ ಹೆಗ್ಗಳಿಕೆ ಪಡೆದರು. ಅಲ್ಲದೇ ಪಂದ್ಯದಲ್ಲಿ 3 ಸಿಕ್ಸರ್ ಸಿಡಿಸಿ ವಿಶ್ವಕಪ್ ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿ ಎಂಬ ದಾಖಲೆ ಬರೆದರು.

39 ವರ್ಷದ ಗೇಲ್ ಈ ಪಂದ್ಯ ಸೇರಿ ಒಟ್ಟು 40 ಸಿಕ್ಸರ್ ಸಿಡಿಸಿದ್ದಾರೆ. ಈ ಪಟ್ಟಿಯಲ್ಲಿ 37 ಸಿಕ್ಸರ್ ಗಳಿಸಿದ ಎಬಿಡಿ 2ನೇ ಸ್ಥಾನ, 31 ಸಿಕ್ಸರ್ ಸಿಡಿಸಿರುವ ಪಾಟಿಂಗ್ 3ನೇ ಸ್ಥಾನ ಪಡೆದಿದ್ದಾರೆ. ವಿಂಡೀಸ್ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿದ ಒಶೇನ್ ಥಾಮಸ್ 4 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ಹೋಲ್ಡರ್ 3 ವಿಕೆಟ್, ರಸೇಲ್ 2 ಹಾಗೂ ಶೆಲ್ಡನ್ ಕಾಟ್ರೆಲ್ 1 ವಿಕೆಟ್ ಪಡೆದು ಪಾಕಿಸ್ತಾನದ ದಿಡೀರ್ ಸೋಲಿಗೆ ಕಾರಣರಾದರು.

ಪಾಕ್ ಟ್ರೋಲ್: ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲೇ ಅಲ್ಪ ಮೊತ್ತಕ್ಕೆ ಪಾಕ್ ಆಲೌಟ್ ಆಗುತ್ತಿದಂತೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‍ಗೆ ಒಳಗಾಗಿದೆ. ವಿಶ್ವಕಪ್‍ನಂತಹ ದೊಡ್ಡ ಟೂರ್ನಿಗಳಲ್ಲಿ ತಮ್ಮ ತಂಡ ಹೀಗೆ ಅಲ್ಪ ಮೊತ್ತಕ್ಕೆ ಆಲೌಟ್ ಆಗಿದ್ದನ್ನು ಕಂಡ ಪಾಕ್ ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *