ಸಂಸದನಾಗಿ ನನ್ನ ದೂರಿಗೆ ಸ್ಪಂದಿಸದ ನೀವು ಸಾಮಾನ್ಯ ಜನರಿಗೆ ಹೇಗೆ ಸ್ಪಂದಿಸ್ತೀರಿ: ಪ್ರವೀಣ್ ಸೂದ್‍ಗೆ ಪ್ರತಾಪ್ ಸಿಂಹ ಪ್ರಶ್ನೆ

ಮೈಸೂರು: ದೂರು ನೀಡಿದ್ದರೂ ಕ್ರಮ ಕೈಗೊಳ್ಳದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರವೀಣ್‍ಸೂದ್ ಅವರ ನಡೆಯನ್ನು ಟೀಕಿಸಿ ಫೇಸ್‍ಬುಕ್‍ನಲ್ಲಿ ವಿಡಿಯೋ ಒಂದನ್ನು ಸಂಸದ ಪ್ರತಾಪ್ ಸಿಂಹ ಅಪ್ಲೋಡ್ ಮಾಡಿದ್ದಾರೆ.

ಸಾಮಾಜಿಕ ಕಾರ್ಯಕರ್ತೆ ಪ್ರಭಾ ಬೆಳವಂಗಲ ಫೇಸ್‍ಬುಕ್‍ನಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ಅವರ ಅವಹೇಳನಕಾರಿ ಪೋಸ್ಟ್ ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ನಾವು ದೂರು ನೀಡಿದ್ದರೂ ಪೊಲೀಸರು ಇನ್ನು ಯಾಕೆ ಕ್ರಮವನ್ನು ಕೈಗೊಂಡಿಲ್ಲ ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.

ದೂರು ನೀಡುವ ವೇಳೆ ಆ ವ್ಯಕ್ತಿ ಇದ್ದರೋ ಇಲ್ಲವೋ ಗೊತ್ತಿಲ್ಲ. ಯುಆರ್‍ಎಲ್ ಚೆಕ್ ಮಾಡಬೇಕು ಎಂದು ಪ್ರವೀಣ್ ಸೂದ್ ಹೇಳಿದ್ದಕ್ಕೆ ನಾವು ಪ್ರಭಾ ಅವರಿಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ನೀಡಿದ್ವಿ. ಆದರೆ ದೂರಿನ ಸ್ಟೇಟಸ್ ಎಲ್ಲಿಯವರೆಗೆ ಬಂತು ಎನ್ನುವುದನ್ನು ಅವರು ತಿಳಿಸಿಲ್ಲ. ಈ ಬಗ್ಗೆ ಸೋಮವಾರ ಕೇಳಿದ್ದಕ್ಕೆ ನಾನೇ ನಿಮಗೆ ಫೋನ್ ಮಾಡ್ತೀನಿ ಅಂತ ಪ್ರವೀಣ್ ಸೂದ್ ಹೇಳಿದ್ರು. ಆದರೆ ದೂರು ದಾಖಲಾದ ಬಳಿಕ 10 ದಿನವಾದರೂ ಇದೂವರೆಗೂ ಕೇಸ್ ಸ್ಟೇಟಸ್ ರಿಪೋರ್ಟ್ ಗೊತ್ತಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ವಿರುದ್ಧ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಕ್ಕೆ ತುಮಕೂರಿನಲ್ಲಿ ನಾಗರಾಜ್‍ರನ್ನು ಬಂಧಿಸುತ್ತೀರಿ. ಅದೇ ವೇಗವನ್ನು ಈ ಪ್ರಕರಣದಲ್ಲಿ ನೀವು ಯಾಕೆ ತೋರಿಸಿಲ್ಲ? ದೂರು ನೀಡಿದ ವ್ಯಕ್ತಿಗೆ ಆ ಪ್ರಕರಣ ಬಗ್ಗೆ ಸಂಪೂರ್ಣವಾಗಿ ತಿಳಿಯುವ ಹಕ್ಕು ಇದೆ. ಅಷ್ಟೇ ಅಲ್ಲದೇ ದೂರು ನೀಡಿದ ವ್ಯಕ್ತಿಗೆ ಆ ಪ್ರಕರಣ ಎಲ್ಲಿಗೆ ಬಂತು ಎಂದು ತಿಳಿಸುವುದು ಪೊಲೀಸರ ಕರ್ತವ್ಯ. ಆದರೆ ಈ ಪ್ರಕರಣದಲ್ಲಿ ಇದ್ಯಾವುದು ನಡೆಯುತ್ತಿಲ್ಲ ಯಾಕೆ ಎಂದು ಅವರು ಪ್ರವೀಣ್ ಸೂದ್ ಅವರಲ್ಲಿ ಪ್ರಶ್ನೆ ಕೇಳಿದ್ದಾರೆ.

ಒಂದು ವೇಳೆ ಈ ಪ್ರಕರಣದ ಬಗ್ಗೆ ನೀವು ತಿಳಿಸದೇ ಇದ್ದರೆ ನಾವು ಹೈಕೋರ್ಟ್ ಮೊರೆ ಹೋಗಿ ಉತ್ತರವನ್ನು ಪಡೆದುಕೊಳ್ಳಬೇಕಾಗುತ್ತದೆ. ಒಬ್ಬ ಸಂಸದನ ದೂರಿಗೆ ಸ್ಪಂದಿಸದ ನೀವು ಜನ ಸಾಮಾನ್ಯರ ಸಮಸ್ಯೆಗಳಿಗೆ ಹೇಗೆ ಸ್ಪಂದಿಸುತ್ತೀರಿ? ಪೊಲೀಸ್ ಇಲಾಖೆಯ ಬಗ್ಗೆ ನನಗೆ ಗೌರವ ಇದೆ. ಹೀಗಾಗಿ ಈ ವಿಡಿಯೋ ನೋಡಿಯಾದರೂ ನೀವು ಉತ್ತರ ನೀಡುತ್ತೀರಿ ಎನ್ನುವ ನಂಬಿಕೆಯನ್ನು ನಾನು ಇಟ್ಟುಕೊಂಡಿದ್ದೇನೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.

ಏನಿದು ದೂರು? 
ಉತ್ತರ ಪ್ರದೇಶದ ನೂತನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಹಿಳೆಯೊಬ್ಬಳ ಜೊತೆ ಇದ್ದಾರೆ ಎಂದು ಅಶ್ಲೀಲ ವಿಡಿಯೋದ ಫೋಟೋ ಒಂದನ್ನು ಪ್ರಭಾ ಬೆಳವಂಗಲ ಫೇಸ್‍ಬುಕ್‍ನಲ್ಲಿ ಅಪ್ಲೋಡ್ ಮಾಡಿದ್ದರು. ಇದನ್ನು ಖಂಡಿಸಿ ಪ್ರಭಾ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸಂಸದ ಪ್ರತಾಪ್ ಸಿಂಹ ನೇತೃತ್ವದಲ್ಲಿ ಬಿಜೆಪಿ ಯುವಮೋರ್ಚಾ ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಅವರಿಗೆ ದೂರು ನೀಡಿತ್ತು.

ಇದನ್ನೂ ಓದಿ: ಐಪಿಎಸ್ ಅಧಿಕಾರಿಗಳ ವರ್ಗಾವಣೆ: ಐಪಿಎಸ್ ರೂಪಾ, ಪ್ರತಾಪ್ ಸಿಂಹ ನಡುವೆ ಟ್ವಿಟ್ಟರ್ ವಾರ್

Comments

Leave a Reply

Your email address will not be published. Required fields are marked *