ಹನುಮ ಮಾಲಾಧಾರಿಗಳ ಮೆರವಣಿಗೆ ತಡೆದಿದ್ದು ಯಾಕೆ: ಎಸ್‍ಪಿ ರವಿ ಚನ್ನಣ್ಣವರ್ ಹೇಳ್ತಾರೆ ಓದಿ

ಮೈಸೂರು: ಹನುಮ ಮಾಲಾಧಾರಿಗಳ ಮೆರವಣಿಗೆ ವೇಳೆ ಯಾವುದೇ ಲಾಠಿ ಚಾರ್ಜ್ ಮಾಡಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ. ಚನ್ನಣ್ಣವರ್ ಹೇಳಿದ್ದಾರೆ.

ಗುಂಪು ಚದುರಿಸುವ ವೇಳೆ ಕೆಲವು ಉದ್ರಿಕ್ತರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ಸಂಬಂಧ ಸುಮಾರು 50 ಜನರನ್ನು ವಶಕ್ಕೆ ಪಡೆದಿದ್ದೇವೆ ಎಂದು ಜಿಲ್ಲಾ ವರಿಷ್ಠಾಧಿಕಾರಿ ರವಿ ಡಿ.ರವಿ ಚನ್ನಣ್ಣವರ್ ಸ್ಪಷ್ಟನೆ ನೀಡಿದ್ದಾರೆ.

ಹನುಮ ಮಾಲಾಧಾರಿಗಳು ನಗರದಲ್ಲಿ ಮೆರವಣಿಗೆ ನಡೆಸಲು ಪ್ರತ್ಯೇಕ ಮಾರ್ಗವನ್ನು ನಿಗದಿ ಮಾಡಲಾಗಿತ್ತು. ಆದರೆ ಕೆಲವರು ಬೇರೆ ಮಾರ್ಗದಲ್ಲಿ ಮೆರವಣಿಗೆ ನಡೆಸಲು ಅನುಮತಿ ಕೋರಿ ಮನವಿ ಪತ್ರ ಸಲ್ಲಿಸಿದ್ದರು. ಆದರೆ ಜಿಲ್ಲಾಧಿಕಾರಿಗಳಿಂದ ಈ ಪತ್ರಕ್ಕೆ ಅನುಮತಿ ಸಿಗದ ಕಾರಣ ಮೆರವಣಿಗೆ ವೇಳೆ ಶಾಂತಿ ಕಾಪಾಡಲು ಭದ್ರತೆ ಕ್ರಮವನ್ನು ತೆಗೆದುಕೊಂಡಿದ್ದೆವು. ಈ ವೇಳೆ ಕೆಲ ಮಂದಿ ಅನುಮತಿ ರಹಿತ ಮಾರ್ಗವಾಗಿ ಮೆರವಣಿಗೆ ನಡೆಸಲು ಹೊರಟಿದ್ದರು. ಅವರನ್ನು ನಾವು ತಡೆದಿದ್ದೆವೆ. ಶಾಂತಿ ವ್ಯವಸ್ಥೆಗೆ ಧಕ್ಕೆ ತರುವ ಇಂತಹ ಕ್ರಮಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ಬಿಳಕೆರೆ ಬಳಿ ಸಂಸದರನ್ನು ತಡೆಯಲು ಪೊಲೀಸರು ಮುಂದಾಗಿದ್ದರು. ಆದರೆ ವಾಹನ ತಡೆಯಲು ಪೊಲೀಸರು ಹಾಕಿದ್ದ ಬ್ಯಾರಿಕೇಡ್ ದೂಡಿ ಕಾರನ್ನು ಚಲಾಯಿಸಿದ್ದಕ್ಕೆ ಸಂಸದ ಪ್ರತಾಪ್‍ಸಿಂಹ ಅವರನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ವಿಡಿಯೋ ಲಭ್ಯವಾಗಿದ್ದು, ಸ್ಥಳದಲ್ಲಿರುವ ಅಧಿಕಾರಿಗಳನ್ನು ಮಾಹಿತಿ ಪಡೆದು ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸದ್ಯ ಸಂಸದ ಪ್ರತಾಪ್ ಸಿಂಹ ಅವರು ನಮ್ಮ ಜತೆಯಲ್ಲೇ ಇದ್ದಾರೆ. ಸಾರ್ವಜನಿಕರು ಯಾವುದೇ ಊಹಾಪೋಹಗಳಿಗೆ ಕಿವಿಗೊಡಬಾರದು. ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಜನರು ಹಾಗೂ ಜನಪ್ರತಿನಿಧಿಗಳು ಸಹಕಾರ ನೀಡಬೇಕು ಎಂದು ವಿನಂತಿ ಮಾಡಿದರು.

 

 

Comments

Leave a Reply

Your email address will not be published. Required fields are marked *