ಟಾಟಾ ಮೋಟಾರ್ಸ್ ಷೇರು ಮೌಲ್ಯ 40% ಕುಸಿತವಾದ್ರೂ ಆತಂಕ ಪಡೋ ಅಗತ್ಯವಿಲ್ಲ: ನಿಜವಾಗಿ ಆಗಿದ್ದೇನು?

– ಎರಡು ಕಂಪನಿಗಳಾಗಿ ಟಾಟಾ ಮೋಟಾರ್ಸ್‌ ವಿಭಜನೆ

ಮುಂಬೈ: ಟಾಟಾ ಮೋಟಾರ್ಸ್ (Tata Motors) ತನ್ನ ಪ್ರಯಾಣಿಕ ಮತ್ತು ವಾಣಿಜ್ಯ ವಾಹನ ವಿಭಾಗಗಳನ್ನು ಪ್ರತ್ಯೇಕಿಸಿದೆ. ಮಂಗಳವಾರ ಅಧಿಕೃತವಾಗಿ ವಿಭಜನೆಯಾದ ಬೆನ್ನಲ್ಲೇ ಟಾಟಾ ಮೋಟಾರ್ಸ್‌ ಷೇರಿನ ಮೌಲ್ಯ ಶೇ. 40 ರಷ್ಟು ಇಳಿಕೆಯಾಗಿದೆ.

ಇನ್ನು ಮುಂದೆ  ಪ್ರಯಾಣಿಕ ವಾಹನ ವಿಭಾಗ ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ (TMPV) ಆಗಿ ಬದಲಾದರೆ ವಾಣಿಜ್ಯ ವಿಭಾಗ ಟಾಟಾ ಮೋಟಾರ್ಸ್‌ ಕಮರ್ಷಿಯಲ್ ವೆಹಿಕಲ್ಸ್ (TMLCV) ಆಗಿ ಕಾರ್ಯನಿರ್ವಹಿಸಲಿದೆ.

ಇಂದಿನಿಂದ ಮಾತೃ ಕಂಪನಿಯು ವಾಣಿಜ್ಯ ವಾಹನಗಳ ವಿಭಾಗವನ್ನು ಪ್ರತಿಬಿಂಬಿಸದೇ ವ್ಯಾಪಾರ ಮಾಡಲಿದೆ. TMPV ಪ್ರಯಾಣಿಕ ವಾಹನಗಳು, ವಿದ್ಯುತ್ ವಾಹನಗಳು ಮತ್ತು ಜಾಗ್ವಾರ್ ಲ್ಯಾಂಡ್ ರೋವರ್ (JLR) ವಾಹನಗಳ ಕಾರ್ಯಾಚರಣೆ ನೋಡಿಕೊಳ್ಳಲಿದೆ.  ಇದನ್ನೂ ಓದಿ:  ಮುಂದಿನ 4-6 ತಿಂಗಳಿನಲ್ಲಿ ಪೆಟ್ರೋಲ್‌ ಕಾರು ದರದಲ್ಲಿ ಇವಿ ಸಿಗುತ್ತೆ: ಗಡ್ಕರಿ

 

ತಾತ್ಕಾಲಿಕ ಕುಸಿತ
ಷೇರಿನ ಮೌಲ್ಯ ನಿಜವಾಗಿ ಕುಸಿದಿಲ್ಲ. ವ್ಯವಹಾರ ವಿಭಜನೆಯಿಂದಾದ ಮೌಲ್ಯದ ಹೊಂದಾಣಿಕೆಯಿಂದ ಆಗಿರುವ ಕುಸಿತ ಇದಾಗಿದೆ. ಸೋಮವಾರ ಷೇರು ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್‌ ಒಂದು ಷೇರು 660.75 ರೂ.ನಲ್ಲಿ ದಿನದ ವ್ಯವಹಾರ ಮಗಿಸಿತ್ತು. ಇಂದು ಸುಮಾರು ಶೇ. 40.22 ರಷ್ಟು(265.75 ರೂ.) ಕುಸಿತಗೊಂಡು ದಿನದ ಕೊನೆಯಲ್ಲಿ 395 ರೂ. ನಲ್ಲಿ ವ್ಯವಹಾರ ಮುಗಿಸಿದೆ.

ಟಾಟಾ ಮೋಟಾರ್ಸ್‌ ಕಂಪನಿಯು ಅಕ್ಟೋಬರ್ 14 ಅನ್ನು ವಿಭಜನೆಯ ದಿನಾಂಕವನ್ನಾಗಿ ನಿಗದಿಪಡಿಸಿತ್ತು. ಇದರ ಅನ್ವಯ ಈ ದಿನಾಂಕದಂದು ಟಾಟಾ ಮೋಟಾರ್ಸ್ ಷೇರುಗಳನ್ನು ಹೊಂದಿದ್ದ ಷೇರುದಾರರು ವಿಭಜನೆಯ ಪ್ರಯೋಜನ ಪಡೆಯಲು ಅರ್ಹರಾಗಿರುತ್ತಾರೆ. ಅರ್ಹ ಷೇರುದಾರರು ತಾವು ಹೊಂದಿರುವ ಪ್ರತಿ ಟಾಟಾ ಮೋಟಾರ್ಸ್ ಷೇರಿಗೆ ಬದಲಾಗಿ ಹೊಸದಾಗಿ ರಚನೆಯಾದ ವಾಣಿಜ್ಯ ವಾಹನ ಕಂಪನಿಯಾದ TMLCV ಒಂದು ಷೇರನ್ನು ಹೆಚ್ಚುವರಿಯಾಗಿ ಪಡೆಯಲಿದ್ದಾರೆ. ಇದನ್ನೂ ಓದಿ:  ಕಾರುಗಳ ಬೆಲೆ ಭಾರೀ ಇಳಿಕೆ- ಯಾವ ಕಾರುಗಳ ಬೆಲೆ ಎಷ್ಟು ಇಳಿಕೆ? ಇಲ್ಲಿದೆ ಕಂಪ್ಲೀಟ್‌ ಮಾಹಿತಿ

TMLCV ಕಂಪನಿಯ ಷೇರುಗಳನ್ನು 30–45 ದಿನಗಳಲ್ಲಿ ಡಿಮ್ಯಾಟ್ ಖಾತೆಗಳಿಗೆ ಜಮೆಯಾಗಲಿದೆ. ಸೆಬಿಯ ಎಲ್ಲಾ ಅನುಮೋದನೆಗಳು ಪೂರ್ಣಗೊಂಡ ನಂತರ ಹೊಸ ಕಂಪನಿ ರಾಷ್ಟ್ರೀಯ ಷೇರುಪೇಟೆ(NSE) ಮತ್ತು ಬಾಂಬೆ ಷೇರುಪೇಟೆಯಲ್ಲಿ(BSE) ಪ್ರತ್ಯೇಕವಾಗಿ ಪಟ್ಟಿಯಾಗಲಿದೆ.